ಕಾರವಾರ: ಆಮ್ ಆದ್ಮಿ ಪಾರ್ಟಿಯ ಕಾರವಾರ- ಅಂಕೋಲಾ ಕ್ಷೇತ್ರದ ಅಭ್ಯರ್ಥಿ ಆಶಿಶ್ ಗಾಂವ್ಕರ್ ಅವರು ಬುಧವಾರ ನಾಮಪತ್ರ ಸಲ್ಲಿಸಿದರು.
ಬೆಂಬಲಿಗರೊಂದಿಗೆ ಸರಳವಾಗಿ ಕಾರವಾರ ನಗರಸಭೆಯಲ್ಲಿನ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ ಆಮ್ ಆದ್ಮಿ ಅಭ್ಯರ್ಥಿ ಆಶಿಶ್, ಚುನಾವಣಾ ಅಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಯ ವೇಳೆ ಮೂರು ಧರ್ಮಗಳ ಸಾಮಾಜಿಕ ಕಾರ್ಯಕರ್ತರಾದ ಲಿಯೋ ಲೂಯಿಸ್, ಯಾಕೂಬ್ ಖಾನ್, ಸತ್ಯಾನಂದ ಪ್ರಭು, ವಿದ್ಯಾರ್ಥಿ ಮುಖಂಡ ಸೋಮೇಶ್ ಆಚಾರಿ ಆಶಿಶ್ ಗೆ ಸಾಥ್ ನೀಡಿದರು.
ಬಿ.ಇ., ಎಂ.ಟೆಕ್ ಪದವೀಧರರಾಗಿರುವ ಆಶಿಶ್, ಉತ್ಸಾಹಿ ಕ್ರಿಯಾಶೀಲ ಯುವಕ. ವಿದ್ಯಾರ್ಥಿ ದೆಸೆಯಿಂದ ಸಾಮಾಜಿಕ ಚಟುವಟಿಕೆ, ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಆಶಿಶ್, ಈ ಬಾರಿ ಹಲವು ಕನಸುಗಳನ್ನ ಹೊತ್ತು ಚುನಾವಣೆಗೆ ಧುಮುಕಿ, ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿಸ್ದು, ಕ್ಷೇತ್ರದ ಮತದಾರರು ಕೂಡ ಕೈಹಿಡಿಯುತ್ತಾರೆಂಬ ವಿಶ್ವಾಸವಿದೆ ಎಂದರು.