ಕಾರವಾರ: ಪ್ರಸಕ್ತ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ನಿಮಿತ್ತ ಕೇಂದ್ರ ಚುನಾವಣಾ ಆಯೋಗವು ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ವಿಶೇಷವಾಗಿ ಒದಗಿಸಿರುವ ಮನೆಯಿಂದಲೇ ಮತದಾನ ಮಾಡುವ ಅವಕಾಶ ಬಳಸಿಕೊಂಡು ಪ್ರತಿಯೊಬ್ಬರೂ ತಪ್ಪದೇ ನಿರ್ಭೀತಿಯಿಂದ ಕಡ್ಡಾಯ ಮತ್ತು ನಿಷ್ಪಕ್ಷವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ನ ಆವಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕಾರವಾರ ತಾಲೂಕು ಪಂಚಾಯತ್ ರವರ ವತಿಯಿಂದ ಸಾರ್ವಜನಿಕರಿಗೆ ಕಡ್ಡಾಯ ಹಾಗೂ ನಿಷ್ಪಕ್ಷಪಾತ ಮತದಾನ ಕುರಿತು ಅರಿವು ಮೂಡಿಸುವ ನಿಮಿತ್ತ ನಗರದಾದ್ಯಂತ ಆಯೋಜಿಸಿದ್ದ ವಿಶೇಷ ಚೇತನರ ತ್ರಿಚಕ್ರ ವಾಹನ ಜಾಥಾಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಮತದಾನ ಮಹತ್ವ, ಪ್ರಕ್ರಿಯೆ, ಕಡ್ಡಾಯ ಮತದಾನ ಕುರಿತು ಅರಿವು ಮೂಡಿಸಲು ಈಗಾಗಲೇ ಫಲಪುಷ್ಪ ಪ್ರದರ್ಶನ, ಯೂತ್ ಪಾರ್ಲಿಮೆಂಟ್, ಮಾನವ ಸರಪಳಿ ನಿರ್ಮಾಣ, ಕ್ಯಾಂಡಲ್ ಲೈಟ್, ಕಾಲ್ನಡಿಗೆ, ಬೈಕ್, ಆಟೋ ಜಾಥಾದಂತಹ ವಿವಿಧ ಸ್ವೀಪ್ ಚಟುವಟಿಕೆಗಳನ್ನು ನಡೆಸಿ ಅರಿವು ಮೂಡಿಸಲಾಗುತ್ತಿದೆ. ಈ ವೇಳೆ ಚುನಾವಣಾ ಆಯೋಗದಿಂದ ನಿರ್ಮಿತ ಚುನಾವಣಾ ಗೀತೆ ಪ್ರಸಾರ, ಪ್ರತಿಜ್ಞಾ ವಿಧಿ ಬೋಧಿಸುವ ಕಾರ್ಯವಾಗಿದೆ ಎಂದರು.
ಪಿಆರ್ಇಡಿ, ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿಶೇಷ ಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಲಾಗಿದೆ. ಹೀಗಾಗಿ ಪ್ರಸ್ತುತ ಚುನಾವಣೆಯಲ್ಲಿ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಅನುಕೂಲಕರ ವಾತಾವರಣವನ್ನು ಚುನಾವಣಾ ಆಯೋಗ ಒದಗಿಸಿದ್ದು, ಮನೆಯಿಂದಲೇ ತಮ್ಮ ಇಚ್ಛೆಯಂತೆ ಮತದಾನ ಮಾಡಲು ಅವಕಾಶವಿದೆ. ಜಿಲ್ಲೆಯಲ್ಲಿ ಒಟ್ಟರೆಯಾಗಿ ಅಂದಾಜು 15 ಸಾವಿರಕ್ಕೂ ಅಧಿಕ ವಿಶೇಷ ಚೇತನರಿದ್ದು, ಅವರೆಲ್ಲರೂ ಚುನಾವಣಾ ಆಯೋಗವು ವಿಶೇಷವಾಗಿ ನೀಡಿರುವ ನಮೂನೆ-12(ಡಿ)ಯನ್ನು ತುಂಬುವ ಮೂಲಕ ಮೇ. 10ರಂದು ತಪ್ಪದೇ ಮತದಾನ ಮಾಡಬೇಕು. ಜೊತೆಗೆ ತಮ್ಮ ಸುತ್ತಮುತ್ತಲಿನ ಸಾರ್ವಜನಿಕರಿಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸಬೇಕು ಎಂದು ತಿಳಿಸಿದರು.
ನಂತರ ವಿಶೇಷ ಚೇತನರ ತ್ರಿಚಕ್ರ ವಾಹನ ಜಾಥಾವು ನಗರದ ಜಿಲ್ಲಾ ಪಂಚಾಯತ್ನಿಂದ ಪ್ರಾರಂಭವಾಗಿ ಡಾ. ಪಿಕಳೆ ಆಸ್ಪತ್ರೆ ಹತ್ತಿರದಿಂದ ಅಂಬೇಡ್ಕರ್ ವೃತ್ತದ ಮೂಲಕ ಕೋಡಿಭಾಗ ಮುಖ್ಯ ರಸ್ತೆ, ಕಾಜುಭಾಗ ಕ್ರಾಸ್ದಿಂದ ಶಿವಾಜಿ ಕಾಲೇಜು(ಬಾಡ) ತಲುಪಿ ಶಿವಾಜಿವಾಡಾ ರಸ್ತೆ ಮೂಲಕ ಕೋಡಿಭಾಗ ರಸ್ತೆಯಿಂದ ಅರ್ಜುನ ಚಿತ್ರ ಮಂದಿರ ಮಾರ್ಗವಾಗಿ ಎಂ.ಜಿ. ರಸ್ತೆ ಮೂಲಕ ಜಿಲ್ಲಾ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಲುಪಿ ನಂತರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಭವನದಲ್ಲಿ ಚುನಾವಣಾ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಮುಕ್ತಾಯವಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿ(ಆಡಳಿತ) ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಉಸ್ತುವಾರಿ ಅಧಿಕಾರಿಗಳಾದ ಶ್ರೀಮತಿ ಜಯಲಕ್ಷ್ಮಿ, ಉಪ ಕಾರ್ಯದರ್ಶಿ(ಅಭಿವೃದ್ಧಿ) ಡಿ.ಎಂ. ಜಕ್ಕಪ್ಪಗೋಳ್, ಯೋಜನಾ ನಿರ್ದೇಶಕರು(ಡಿಆರ್ಡಿಎ) ಕರೀಂ ಅಸದಿ, ಮುಖ್ಯ ಲೆಕ್ಕಾಧಿಕಾರಿಗಳಾದ ಸತೀಶ್ ಪವಾರ, ಸಹಾಯಕ ಕಾರ್ಯದರ್ಶಿ(ಆಡಳಿತ) ಸುನಿಲ್ ನಾಯ್ಕ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಶ್ಯಾಮಲಾ ನಾಯ್ಕ, ಕಾರವಾರ ತಾಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಆನಂದಕುಮಾರ ಬಾಲಪ್ಪನವರ, ನರೇಗಾ ಸಹಾಯಕ ನಿರ್ದೇಶಕರಾದ ರಾಮದಾಸ ನಾಯ್ಕ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.