News Kannada
Saturday, February 24 2024
ಉತ್ತರಕನ್ನಡ

ಕಾರವಾರ: ಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ- ಮಾಜಿ ಸಚಿವ ಆನಂದ ಅಸ್ನೋಟಿಕರ್

Photo Credit : By Author

ಕಾರವಾರ: ಕಾರವಾರ-ಅಂಕೋಲಾ ಕ್ಷೇತ್ರದ ಇತಿಹಾಸದಲ್ಲಿ ಯಾವತ್ತೂ ನೋಡದ ಭ್ರಷ್ಟಾಚಾರ ಸದ್ಯದ ಆಡಳಿತದಲ್ಲಿ ತುಂಬಿ ತುಳುಕಾಡುತ್ತಿದೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಯಾವುದೇ ಕೈಗಾರಿಕೆ ಇಲ್ಲದೇ, ನಮ್ಮಲ್ಲಿರುವ ಯುವಜನತೆ ಉದ್ಯೋಗವಿಲ್ಲದೇ ಪರದಾಡುವಂತಾಗಿದೆ. ಸೀಬರ್ಡ್ ಮತ್ತು ಕೈಗಾ ಪ್ರಾಜೆಕ್ಟ್ಗಳಲ್ಲಿ ಹಾಗೂ ವಿವಿಧೆಡೆ ನೋಂದಣಿ ಮಾಡಿಕೊಂಡಿರುವ ಗುತ್ತಿಗೆದಾರರು ಶಾಸಕರ ನಿಧಿಯ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಇವರಿಂದಾಗಿ ನಮ್ಮ ಹಲವಾರು ಸಣ್ಣ, ಯುವ ಗುತ್ತಿಗೆದಾರರು, ಬಹಳ ನೊಂದಿದ್ದಾರೆ. ಇಂದು ಕಮಿಷನ್ ಇಲ್ಲದಿದ್ದರೆ ಶಂಕುಸ್ಥಾಪನೆಗೆ ಜನಪ್ರತಿನಿಧಿಗಳು ಬರುವುದಿಲ್ಲ. ಶೇ.20 ರಿಂದ ಶೇ.40 ರಷ್ಟು ಕಮೀಷನ್ ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಪಕ್ಷವನ್ನು 40 ಪರ್ಸಂಟ್ ಕಮಿಷನ್ ಪಕ್ಷ ಎಂದು ಕರೆಯಲಾಗುತ್ತಿದೆ. ಈ 40 ಪರ್ಷಂಟ್ ಶಬ್ದ ಆರಂಭವಾಗಿದ್ದೇ ನಮ್ಮ ಕಾರವಾರ ಕ್ಷೇತ್ರದಿಂದ ಎನ್ನುವುದು ಮುಖ್ಯ ವಿಚಾರವಾಗಿದೆ. ಸ್ಥಳೀಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಾಗು ನಾನು ಸೇರಿ 160 ಕೋಟಿ ರೂ. ನ 450 ಹಾಸಿಗೆಯ ಆಸ್ಪತ್ರೆ ಕಟ್ಟಡದ ಶಂಖು ಸ್ಥಾಪನೆಯಾಗದೇ ಇರುವುದರ ಬಗ್ಗೆ ವಿಚಾರ ಮಾಡಿದಾಗ ಕಮಿಷನ್‌ಗಾಗಿ ಅದು ಆಗಿಲ್ಲ ಎಂಬುದು ತಿಳಿದು ಬಂದಿತ್ತು. ಆ ಬಳಿಕ ನಾವು ಹೋರಾಟ ಆರಂಭಿಸಿದAದಿನಿಂದ ಇದು ಇಡೀ ರಾಜ್ಯಕ್ಕೆ ಹಬ್ಬಿದೆ. ಈ ಕಳಂಕ ನಮ್ಮ ಕ್ಷೇತ್ರದ ಜನಪ್ರತಿನಿಧಿಗಳಿಗೆ ಹಾಗೂ ಜನರಿಗೂ ಇದ್ದಂತಾಗಿದೆ ಎಂದರು.
ಕಳೆದ ಚುನಾವಣೆಯಲ್ಲಿ ಮೋದಿಯವರ ಆಶೀರ್ವಾದದಿಂದ, ಕಾರ್ಯಕರ್ತರ ಶ್ರಮದಿಂದ ಗೆದ್ದು ಬಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಳೆದ ಮೂರುವರೆ ವರ್ಷದಲ್ಲಿ ಕಾರವಾರ ಹಾಗೂ ಅಂಕೋಲಾಗೆ ಅಭಿವೃದ್ಧಿಗಾಗಿ ಯಾವುದೇ ಅನುದಾನವೇ ಬಂದಿಲ್ಲ. ರಾಜಕಾರಣ ದುಡ್ಡು ಮಾಡಲು ನಡೆಸಲಾಗುತ್ತಿದೆ ಎಂದರು.

ಶಾಸಕರು ತಮಗೆ ಧೈರ್ಯವಿದ್ದರೆ ಆದಾಯ ತೆರಿಗೆ ಅಧಿಕಾರಿಗಳಿಗೆ ತಮ್ಮ ಒಟ್ಟೂ ಆಸ್ತಿಯ ಮಾಹಿತಿ ನೀಡಿ. ಯಾವ ಮೂಲದಿಂದ ಕೋಟ್ಯಾಂತರ ರೂ. ಬೆಲೆಯ ಕಾರು ಬಳಸುತ್ತಿದ್ದೀರಿ? ವಿವಿಧ ಕಾರ್ಯಕ್ರಮಗಳಲ್ಲಿ ದೇವಸ್ಥಾನಗಳಿಗೆ ಲಕ್ಷಾಂತರ ರೂ. ಗಳನ್ನು ನೀಡಿ ಪಟ್ಟಿಯಲ್ಲಿ ಬರೆಸುತ್ತಿದ್ದೀರಿ ಎನ್ನುವ ಬಗ್ಗೆ ನಿಮ್ಮ ಆದಾಯದ ಸಂಪೂರ್ಣ ಮಾಹಿತಿಯನ್ನು ಅವರಿಗೆ ನೀಡಿ. ಪಾರದರ್ಶಕವಾಗಿ ನಿಮ್ಮ ಆದಾಯದ ಬಗ್ಗೆ ಮಾಹಿತಿಯನ್ನು ಜನರಿಗೆ ನೀಡಿ ಎಂದು ಸವಾಲು ಹಾಕಿದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜನತೆಯ ಕಿವಿಗೆ ಇಡುತ್ತಿರುವ ಹೂವು:
ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅತೀ ಅವಶ್ಯವಾಗಿದೆ. ಆದರೆ ವಿಧಾನಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿದ್ದು ಈ ಸಂದರ್ಭದಲ್ಲಿ ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ ವೀಕ್ಷಣೆ ಎಂದು ಜಿಲ್ಲೆಯ ಜನರ ಕಿವಿಯ ಮೇಲೆ ಹೂವು ಇಡಲಾಗುತ್ತಿದೆ. ಇನ್ನೂ ಜಾಗದ ಕಾಗದ ಕಾರ್ಯ ನಡೆದಿಲ್ಲ. ಅಷ್ಟರೊಳಗೆ ನೀತಿ ಸಂಹಿತೆ ಬರಲಿದೆ. ಹೀಗಾಗಿ ಇದನ್ನು ಚುನಾವಣೆ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಸಚಿವ ಡಾ. ಸುಧಾಕರ ಅವರು ಜಿಲ್ಲೆಗೆ ಬಂದು ಘೋಷಣೆ ಮಾಡಿದ್ದಾರೆ ಹೊರತು ಬೇರೇನಿಲ್ಲ ಎಂದರು.

ಕೊಂಕಣಿ ಫಲಕ ಬೇಕು:
ತಾನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವನಿದ್ದಾಗ ಅಲ್ಲಿನ ಗಡಿ ಭಾಗದ ನಗರದಲ್ಲಿ ರಸ್ತೆಗಳಿಗೆ ತೆಲುಗು ನಾಮಫಲಕಗಳನ್ನೂ ಅಳವಡಿಸಲಾಗಿತ್ತು. ಸ್ಥಳೀಯ ಭಾಷೆಗೆ ಮಹತ್ವ ನೀಡಿ ಕಾರವಾರದಲ್ಲಿಯೂ ಕೊಂಕಣಿ ಭಾಷೆಯ ನಾಮಫಲಕಗಳನ್ನು ಅಳವಡಿಸುವ ಕ್ರಮವಾಗಬೇಕು. ನಾವು ಕನ್ನಡ ನೆಲವನ್ನೇ ಪ್ರೀತಿಸುತ್ತೇವೆ. ಕನ್ನಡಿಗರಾಗಿಯೇ ಇರುತ್ತೇವೆ ಆದರೂ ನಮ್ಮ ಮಾತೃ ಭಾಷೆ ಕೊಂಕಣಿ. ಹೀಗಾಗಿ ಕೊಂಕಣಿಗರು ಇರುವೆಡೆ ದೇವನಾಗರಿ ಲಿಪಿಯಲ್ಲಿಯೇ ಕೊಂಕಣಿ ನಾಮಫಲಕಗಳನ್ನೂ ಅಳವಡಿಸಬೇಕು ಎಂದು ಹೇಳಿದರು.

ಕೈಗಾ ಪ್ರಾಜೆಕ್ಟ್ ಗೆ ಅನುಮತಿ ಸಂಪೂರ್ಣ ರದ್ದಾಗಲಿ:
ಕೈಗಾ 5-6 ನೇ ಘಟಕಕ್ಕೆ ಪರಿಸರ ಅನುಮತಿ ರದ್ದು ಮಾಡಿರುವುದು ಉತ್ತಮ ಬೆಳವಣಿಗೆ. ಇಲ್ಲಿನ ಜನರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿರುವ ಕೈಗಾ ಪ್ರಾಜೆಕ್ಟ್ ನಮಗೆ ಬೇಕಾಗಿಲ್ಲ. ಈ ಬಗ್ಗೆ ಹೋರಾಟ ನಡೆಸಿದ ಪೇಜಾವಶ್ರೀಗಳ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. ಇದರಲ್ಲಿ ಸ್ಥಳೀಯ ಜನಪ್ರತಿನಿಧಿ ಶಾಂತಾ ಬಾಂದೇಕರ ಅವರ ಶ್ರಮ ಮಹತ್ವದ್ದಾಗಿದೆ. ಸೀಬರ್ಡ್ ಹಾಗೂ ಕೈಗಾ ಯೋಜನೆಗಳಿಂದ ಜಿಲ್ಲೆಗೆ ಯಾವುದೇ ಉಪಯೋಗವೇ ಆಗಿಲ್ಲ. ಆದರೆ ಮಹಾರಾಷ್ಟçದಲ್ಲಿ ನಾನು ಗಮನಿಸಿದಂತೆ ಇಂತಹ ಯೋಜನೆಗಳಲ್ಲಿ ಸ್ಥಳೀಯ ಸರಕಾರದೊಂದಿಗೆ ಒಪ್ಪಂದವಿದ್ದು ಸ್ಥಳೀಯರಿಗೆ ಉದ್ಯೋಗದ ಭದ್ರತೆ ನೀಡುತ್ತದೆ. ಆದರೆ ಇಲ್ಲಿ ಅದ್ಯಾವುದು ಇಲ್ಲದೇ ಯಾರಿಗೂ ಪ್ರಯೋಜವಾಗಿಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು