News Kannada
Sunday, February 25 2024
ಉತ್ತರಕನ್ನಡ

ಗೋಕರ್ಣ: ಧರ್ಮ ಸಮರದಲ್ಲಿ ರಾಮಭಟರಾಗಿ ಹೋರಾಡಿ- ರಾಘವೇಶ್ವರ ಶ್ರೀ ಕರೆ

Gokarna: A man can become mahatma with equanimity: Raghaveswara Sri
Photo Credit : News Kannada

ಗೋಕರ್ಣ: ಧರ್ಮ, ಅಧರ್ಮದ ಮಧ್ಯೆ, ಒಳಿತು ಕೆಡುಕಿನ ನಡುವೆ ಸಮರ ಸದಾ ಎಲ್ಲೆಡೆ ನಡೆಯುತ್ತಲೇ ಇರುತ್ತದೆ. ಧರ್ಮ- ಅಧರ್ಮದ ಸಮರದಲ್ಲಿ ನಮ್ಮ ಜಾಗವನ್ನು ನಾವು ಆಯ್ದುಕೊಳ್ಳಬೇಕು. ಕಗ್ಗದ ಕವಿ ಹೇಳುವಂತೆ ರಾಮಭಟನಾಗಿ ನಾವು ಕಾರ್ಯ ನಿರ್ವಹಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಗುರಿಕಾರರ ಮತ್ತು ಶ್ರೀ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಧರ್ಮಕಾರ್ಯಗಳಲ್ಲಿ ಗುರಿಕಾರರು ಮಾಧ್ಯಮವಾಗಿ ಕಾರ್ಯ ನಿರ್ವಹಿಸಬೇಕು. ಸೇವೆಯ ಅವಕಾಶ ಎಲ್ಲರಿಗೂ ಸಿಗುವುದಿಲ್ಲ; ಇದು ನಾವು ಆಯ್ಕೆ ಮಾಡಿಕೊಂಡದ್ದಲ್ಲ. ರಾಮನ ಪ್ರೇರಣೆಯಿಂದ ಧರ್ಮಕಾರ್ಯದಲ್ಲಿ ಕೈಜೋಡಿಸುವ ಅವಕಾಶ ಒದಗಿ ಬಂದಿದೆ. ಧರ್ಮಸಮರದ ಸೇನಾಪತಿಗಳಂತೆ ರಾಮನಿಗೆ ಆಂಜನೇಯ ಸೇವೆ ಸಲ್ಲಿಸಿದ ರೀತಿಯಲ್ಲಿ ಶ್ರೀಪೀಠದ, ಸಮಾಜದ ಸೇವೆಗೆ ಕಂಕಣಬದ್ಧರಾಗಿ ಎಂದು ಸಲಹೆ ಮಾಡಿದರು.

ಗುರಿಕಾರರು ಗುರುಗಳ ನೇರ, ನೈಜ, ಆಪ್ತ ಪ್ರತಿನಿಧಿಗಳು. ಸಮಾಜದಲ್ಲಿ ಗುರಿಕಾರರ ಸ್ಥಾನ ಮಹತ್ವದ್ದು. ಶ್ರೀಮಠದ ಎಲ್ಲ ಸೇವಾ ಕಾರ್ಯಗಳನ್ನು ಸಾಕಾರಗೊಳಿಸುವ ಹೊಣೆ ಗುರಿಕಾರರ ಮೇಲಿದೆ. ಶ್ರೀರಾಮಚಂದ್ರಾಪುರ ಮಠ ಎಂದರೆ ಧರ್ಮ ಸರ್ಕಾರ. ವ್ಯಾಪ್ತಿ, ವೈಶಾಲ್ಯ, ಆಳ, ಅಗಲ ಯಾವುದರಲ್ಲೂ ಇದು ಸರ್ಕಾರಕ್ಕೆ ಕಡಿಮೆ ಅಲ್ಲ. ಸರ್ಕಾರಕ್ಕೆ ಎಲ್ಲವೂ ವೇತನ ಕೊಟ್ಟೇ ಕೆಲಸ ಮಾಡಬೇಕು. ಆದರೆ ಶ್ರೀಮಠದ ಸಮಸ್ತ ಕಾರ್ಯಗಳನ್ನು ನಮ್ಮ ಗುರಿಕಾರರು ಹಾಗೂ ಪದಾಧಿಕಾರಿಗಳು ಸೇವಾರೂಪದಿಂದ ನಿರ್ವಹಿಸುತ್ತಾ ಬಂದಿದ್ದಾರೆ. ಸಮಾಜದ ಅಭ್ಯುದಯವೇ ಶ್ರೀಮಠದ ಧ್ಯೇಯ ಎಂದು ಸ್ಪಷ್ಟಪಡಿಸಿದರು.

ನೀವು ಸಮಾಜದ ಸಮಾಜದ ಸೇವಕರು ಮತ್ತು ನಾಯಕರು. ಧರ್ಮವ್ಯವಸ್ಥೆಯನ್ನು ಮುನ್ನಡೆಸುವವರು. ಸಮಸ್ತ ಸಮಾಜದ ಹೃದಯ ಗೆಲ್ಲುವ ಹೊಣೆ ನಿಮ್ಮ ಮೇಲಿದೆ. ಸಮಸ್ತ ಸಮಾಜದ ಸುಖ-ದುಃಖಗಳಲ್ಲಿ ಭಾಗಿಗಳಾಗಬೇಕು. ಘಟಕದ ಎಲ್ಲರನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಹೊಣೆ ನಿಮ್ಮದು. ಅವರ ಕಷ್ಟ ಸುಖಗಳಲ್ಲಿ ನೀವು ಭಾಗಿಗಳಾದಾಗ ಅವರು ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತಾರೆ.

ಸಮಾಜದ ಜನರಿಗೆ ಕಷ್ಟಗಳು ಬಂದಾಗ, ಸವಾಲುಗಳು ಎದುರಾದಾಗ ನಿಮ್ಮ ಹಿಂದೆ ನಾವಿದ್ದೇವೆ; ಶ್ರೀಪೀಠದ ಆಶೀರ್ವಾದ ಇದೆ ಎಂದು ಧೈರ್ಯ ತುಂಬುಕ ಕಾರ್ಯ ಮಾಡಬೇಕು. ಯಾರಿಗೆ ಏನು ಅಗತ್ಯವಿದೆ ಎಂದು ತಿಳಿದುಕೊಂಡು ಅವರ ಜೀವನಕ್ಕೆ ನೆರವಾದಾಗ ನಮ್ಮ ಉಜ್ಜೀವನಕ್ಕೆ ಅವರು ಜತೆಯಾಗುತ್ತಾರೆ ಎಂದು ವಿಶ್ಲೇಷಿಸಿದರು.

ಯಾವ ಕಡೆಯಲ್ಲೂ ಕೇಳಿ ಬರಬಾರದು. ರಾಮ ತನ್ನ ಪ್ರಜೆಗಳನ್ನು ನೋಡಿಕೊಂಡಂತೆ ಸಮಸ್ತ ಸಮಾಜ ಬಾಂಧವರನ್ನು ನೋಡಿಕೊಳ್ಳುವಂತಾಗಬೇಕು. ರಾಮ ನಮಗೆ ಆದರ್ಶವಾಗಬೇಕು. ಇಂಥ ಸೇವೆ ಗುರುಪೀಠಕ್ಕೆ ನೀವು ಸಲ್ಲಿಸುವ ಸರ್ವಶ್ರೇಷ್ಠ ಸೇವೆ.

ಋಷಿಮುನಿಗಳ ತಪಸ್ಸಿನ ಒಂದಂಶ ಆ ರಾಜ್ಯದ ರಾಜನಿಗೆ ಸಲ್ಲುತ್ತಿತ್ತು. ಅಂತೆಯೇ ಗುರು ಅನುಗ್ರಹದ ಒಂದಂಶ ಗುರಿಕಾರರಿಗೆ ಸಲ್ಲುತ್ತದೆ. ಸತ್ಕಾರ್ಯಗಳು, ಪುಣ್ಯ ಕಾರ್ಯಗಳು ನಡೆಯುವಾಗ ಗುರುವಿನ ಸ್ಥಾನದಲ್ಲಿ ನಿಂತು ಕಾರ್ಯ ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡುವವರು ನೀವು. ಶಿಷ್ಯರಿಗೆ ಗುರುಪೀಠ ನೀಡಿದ ಅನುಗ್ರಹ ಶಿಷ್ಯರನ್ನು ತಲುಪುವುದು ಗುರಿಕಾರರ ಮೂಲಕ. ಶಿಷ್ಯರಿಗೆ ಅನುಗ್ರಹ ತಲುಪಿಸುವಾಗ ಒಂದು ಪಾಲು ನಿಮಗೂ ಸಿಗುತ್ತದೆ ಎಂದರು.

ನೀವು ಘಟಕದವರ ಕಷ್ಟ ಸುಖಗಳಲ್ಲಿ ಭಾಗಿಯಾದರೆ ಸಹಜವಾಗಿಯೇ ಅವರೆಲ್ಲರೂ ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ. ದೇವರು ಮತ್ತು ಭಕ್ತರು ಸೇರುವ ಸ್ಥಳವಾದ ದೇವಸ್ಥಾನ ಎಷ್ಟು ಪೂಜ್ಯವೋ, ಗುರುಗಳು ಹಾಗೂ ಭಕ್ತರ ಸೇತುವಾದ ನೀವು ಕೂಡಾ ಅಷ್ಟೇ ಪವಿತ್ರ. ರಾಮನ ಸನ್ನಿಧಿಗೆ ನಿಮ್ಮನ್ನು ಒಯ್ದು ಅನುಗ್ರಹ ದೊರಕಿಸಿಕೊಡುವವನು ಗುರು. ಅಂತೆಯೇ ಶಿಷ್ಯರನ್ನು ಶ್ರೀ ಸನ್ನಿಧಿಗೆ ಕರೆತಂದು ಅನುಗ್ರಹ ಕೊಡಿಸುವ ಹೊಣೆ ನಿಮ್ಮದು. ಯಾವುದೇ ಕಾರಣಕ್ಕೆ ಕರ್ತವ್ಯ ಲೋಪ ಆಗಬಾರದು ಎಂದು ಎಚ್ಚರಿಸಿದರು.

ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಸೇವೆ ಶ್ರೇಷ್ಠ. ಗುರಿಕಾರರ ಇಂಥ ಸೇವೆಯನ್ನು ಗುರುತಿಸಿ ಪ್ರತಿ ವರ್ಷ ಚಾತುರ್ಮಾಸ್ಯ ಸಂದರ್ಭದಲ್ಲಿ ಚಾತುರ್ಮಾಸ್ಯದ ಕೊನೆಯ ಭಾನುವಾರವನ್ನು ಗುರಿಕಾರರ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿದರು. ಗುರಿಕಾರರ ಎಲ್ಲ ಸಂಕಷ್ಟ ಪರಿಹಾರ, ಸೌಭಾಗ್ಯ ಸಿದ್ಧಿಗಾಗಿ ಅಂದು ಗುರಿಕಾರರ ಹೆಸರಲ್ಲಿ ಸಂಕಲ್ಪ ನಡೆಸಿ ಗ್ರಹಶಾಂತಿ ನೆರವೇರಿಸಲಾಗುವುದು ಎಂದು ಪ್ರಕಟಿಸಿದರು.

ಶ್ರೀಮಠದಿಂದ ಗುರಿಕಾರರಾಗಿ ನೇಮಕ ಮಾಡುವಾಗ ಸಾಂಪ್ರದಾಯಿಕವಾಗಿ ನೀಡುವ ಶ್ರೀಮುದ್ರೆಯ ಸಾಟಿ, ಸನ್ನದಿನ ಜತೆಗೆ ಸಭೆಗೆ ನೀವು ಅಲಂಕಾರವಾಗಿ ಕಾಣಬೇಕು ಎಂಬ ಕಾರಣಕ್ಕೆ ಗುರು ಅನುಗ್ರಹಪೂರ್ವಕ ಪೇಟವನ್ನೂ ಇನ್ನು ಎಲ್ಲ ಗುರಿಕಾರರಿಗೆ ನೀಡಲಾಗುತ್ತದೆ.

ಶ್ರೀಮಠದ ವ್ಯವಸ್ಥೆಯಲ್ಲಿ ಮೊಟ್ಟಮೊದಲ ಮಂತ್ರಾಕ್ಷತೆ ಗುರಿಕಾರರಿಗೆ ಸಲ್ಲುತ್ತದೆ ಎಂದು ಹೇಳಿದರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಗುರಿಕಾರರು ಸಮಾವೇಶದಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು