News Karnataka Kannada
Saturday, April 20 2024
Cricket
ಸಂಪಾದಕರ ಆಯ್ಕೆ

ಗೋಫಲ ಟ್ರಸ್ಟ್ ವತಿಯಿಂದ ಗೋಶಾಲೆಗಳಿಗೆ 16.85 ಲಕ್ಷ ರೂಪಾಯಿ ದೇಣಿಗೆ

Gophal Trust donates Rs 16.85 lakh to gaushalas
Photo Credit : News Kannada

ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ಗೋಫಲ ಟ್ರಸ್ಟ್ ವತಿಯಿಂದ ರಾಜ್ಯದ ವಿವಿಧ ಗೋಶಾಲೆಗಳಿಗೆ 16.85 ಲಕ್ಷ ರೂಪಾಯಿಗಳ ದೇಣಿಗೆ ನೀಡಲಾಯಿತು. ವಿವಿಧ ಗೋಶಾಲೆಗಳ ಮುಖ್ಯಸ್ಥರಿಗೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ದೇಣಿಗೆಯ ಚೆಕ್ ಹಸ್ತಾಂತರಿಸಿದರು.

ಗೋಮಯ, ಗೋಮೂತ್ರದ ಮೌಲ್ಯವರ್ಧನೆ ಮೂಲಕ, ದೇಸಿ ಗೋ ಸಾಕಾಣಿಕೆಯನ್ನು ಲಾಭದಾಯಕವಾಗಿ ಮಾಡಲು ಸಾಧ್ಯ ಎಂಬುದನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ರಚಿಸಲ್ಪಟ್ಟ ಗೋಫಲ ಟ್ರಸ್ಟ್, ರಾಜ್ಯದಲ್ಲಿ ಗವ್ಯೋತ್ಪನ್ನಗಳ ತಯಾರಿಕೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಟ್ರಸ್ಟ್‍ನ ಲಾಭಾಂಶದಲ್ಲಿ ಒಂದು ಭಾಗವನ್ನು ಗೋಶಾಲೆಗಳಿಗೆ ವಿತರಿಸಲಾಯಿತು. ಗೋಶಾಲೆಗಳಲ್ಲಿ ಇರುವ ಗೋವುಗಳ ಸಂಖ್ಯೆಯನ್ನು ಆಧರಿಸಿ ಗೋಶಾಲೆಗಳಿಗೆ ದೇಣಿಗೆ ವಿತರಿಸಲಾಗಿದೆ.

ಸಾನ್ನಿಧ್ಯ ವಹಿಸಿದ್ದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ಬಗೆಯ ಗೋ ಉತ್ಪನ್ನಗಳ ತಯಾರಿಕೆಗೆ ಟ್ರಸ್ಟ್ ಕಾರ್ಯ ಯೋಜನೆ ಹಮ್ಮಿಕೊಳ್ಳುವ ಜತೆಗೆ ಹೊಸ ಸಾಧ್ಯತೆಗಳ ಅನ್ವೇಷಣೆ ಬಗ್ಗೆ ಮತ್ತು ಮಾರುಕಟ್ಟೆ ವಿಸ್ತರಣೆ ಬಗ್ಗೆಯೂ ಗಮನ ಹರಿಸುವಂತೆ ಸೂಚಿಸಿದರು.

ಟ್ರಸ್ಟ್ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದ ಶ್ರೀಗಳು, ಗವ್ಯೋತ್ಪನ್ನಗಳ ಮಾರುಕಟ್ಟೆ ವಿಸ್ತರಿಸುವ ಜತೆಗೆ ದೇಸಿ ಗೋ ಸಾಕಾಣಿಕೆ ಲಾಭದಾಯಕ ಎನ್ನುವುದನ್ನು ಸಮಾಜಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಟ್ರಸ್ಟ್ ಮಹತ್ವದ ಪಾತ್ರ ವಹಿಸಬೇಕಿದೆ. ಇಡೀ ರಾಜ್ಯದ ಗೋಪ್ರೇಮಿಗಳಿಗೆ ಇದು ಮಾದರಿ ಹಾಗೂ ಮಾರ್ಗದರ್ಶಿ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

ಗೋಫಲ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಭಟ್ ಕೊಂಕೋಡಿ ಮಾತನಾಡಿ, ಕಳೆದ ಹಣಕಾಸು ವರ್ಷದಲ್ಲಿ ಟ್ರಸ್ಟ್ 4.43 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 39ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಮೂರು ಘಟಕಗಳಲ್ಲಿ ಸೆಗಣಿ ಆಧಾರಿತ ಗಬ್ಬರದ ಉತ್ಪಾದನೆ ನಡೆಯುತ್ತಿದ್ದು, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಸಮೀಪದ ಬಾನ್ಕುಳಿಯಲ್ಲಿ ಹಸ ಕಾರ್ಖಾನೆ ಆರಂಭಿಸಲಾಗಿದೆ ಎಂದು ವಿವರಿಸಿದರು. ಸದ್ಯದಲ್ಲೇ ಜೈವಿಕ ನಿಯಂತ್ರಕಗಳು, ಸಸ್ಯಗಳ ಬೆಳವಣಿಗೆಗೆ ಉತ್ತೇಜಕವಾಗಿ ಕಾರ್ಯ ನಿರ್ವಹಿಸುವ ಸತೌಷಧಿಗಳು, ಗೋ ಚಿಕಿತ್ಸಾ ಔಷಧಿಗಳು, ಗೃಹೋಪಯೋಗಿ ಮುಲಾಮುಗಳು ಇತ್ಯಾದಿಗಳನ್ನು ಹೊಸ ಘಟಕದಲ್ಲಿ ಉತ್ಪಾದಿಸಲಾಗತ್ತದೆ ಎಂದು ತಿಳಿಸಿದರು.

ಟ್ರಸ್ಟ್ ಜನರಲ್ ಮ್ಯಾನೇಜರ್ ಬಾಲಸುಬ್ರಹ್ಮಣ್ಯ ಅವರು ಟ್ರಸ್ಟ್ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿ, ಟ್ರಸ್ಟ್‍ನ ಜೈವಿಕ ಗೊಬ್ಬರಕ್ಕೆ ಭಾರಿ ಬೇಡಿಕೆ ಇದ್ದು, ಇದನ್ನು ಈಡೇರಿಸುವ ನಿಟ್ಟಿನಲ್ಲಿ ಗೊಬ್ಬರ ಉತ್ಪಾದನೆಯ ಮತ್ತಷ್ಟು ಘಟಕಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶ್ರೀಮಠದ ಆಡಳಿತ ಖಂಡದ ಶ್ರೀಸಂಯೋಜಕ ಪ್ರಮೋದ್ ಪಂಡಿತ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಸಂಸ್ಥಾನದವರ ಪರಿಕಲ್ಪನೆಯಂತೆ ಗೋಸಂರಕ್ಷಣೆ, ಗೋಶಾಲೆಗಳ ನಿರ್ವಹಣೆ ಮತ್ತು ಒಟ್ಟು ಸಮಾಜದ ಹಿತಕ್ಕಾಗಿ ಟ್ರಸ್ಟ್ ಹಾಗೂ ಗೋಶಾಲೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಟ್ರಸ್ಟಿಗಳಾದ ಮುಳಿಯ ಕೇಶವ ಪ್ರಸಾದ್, ಕೆಕ್ಕಾರು ರಾಮಚಂದ್ರ ಭಟ್, ಹಾರಕೆರೆ ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು