News Karnataka Kannada
Friday, March 29 2024
Cricket
ಉತ್ತರಕನ್ನಡ

ಕಾರವಾರ: ಕದಂಬ ನೌಕಾನೆಲೆ ಹಿರಿಯ ಅಧಿಕಾರಿಗಳಿಂದ ಮೀನುಗಾರರೊಂದಿಗೆ ಸಮಾಲೋಚನಾ ಸಭೆ

Senior officials of Kadamba Naval Base hold fishermen's consultation meeting
Photo Credit : News Kannada

ಕಾರವಾರ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರ ಮೇಲೆ ಭಾರತೀಯ ನೌಕಾಸೇನೆ ಗಸ್ತು ಸಿಬ್ಬಂದಿಯಿಂದ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕದಂಬ ನೌಕಾನೆಲೆ ಹಿರಿಯ ಅಧಿಕಾರಿಗಳು ಯುವ ಮೀನುಗಾರರ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಹರಿಕಂತ್ರ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಇಲ್ಲಿನ ಕದಂಬ ನೌಕಾನೆಲೆ ಕಚೇರಿಯಲ್ಲಿ ಸಭೆ ನಡೆಯಿತು. ಕಾರವಾರ, ಅಂಕೋಲಾ ಭಾಗದಲ್ಲಿ ಅರಬ್ಬಿ ಸಮುದ್ರದಲ್ಲಿ ನೌಕಾನೆಲೆ ಗಸ್ತು ಸಿಬ್ಬಂದಿಯು ಮೀನುಗಾರರ ಬಲೆ ಕತ್ತರಿಸುವುದು, ವೇಗದ ಬೋಟಿನ ಮೂಲಕ ಅಲೆ ಎಬ್ಬಿಸಿ ಭಯ ಬೀಳುಸಿದ ಘಟನೆ ನಡೆದಿತ್ತು. ಅದನ್ನು ಖಂಡಿಸಿ ಯುವ ಮೀನುಗಾರರ ಸಂಘರ್ಷ ಸಮಿತಿಯು ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿತ್ತು. ಮನವಿ ಆಧರಿಸಿ ನೌಕಾನೆಲೆಯ ಅಧಿಕಾರಿಗಳು ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಯುವ ಮೀನುಗಾರರ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಹರಿಕಂತ್ರ ತಿಳಿಸಿದರು.

ನೌಕಾನೆಲೆ ಪ್ರದೇಶದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧ ಇದೆ. ಹಾಗಾಗಿ ಹತ್ತಿರದಲ್ಲಿ ಮೀನುಗಾರಿಕೆ ಮಾಡಬಾರದು. ಭದ್ರತೆ ದೃಷ್ಟಿಯಿಂದ ಇದು ಅನಿವಾರ್ಯ ಎಂದು ನೌಕಾನೆಲೆ ಅಧಿಕಾರಿಗಳು ಸಮಜಾಯಿಷಿ ನೀಡಿದರು.

ನೌಕಾನೆಲೆ ಸಮುದ್ರ ಗಡಿಯ ಗುರುತು ಪ್ರದೇಶಕ್ಕೂ ಬೋಟಿನಲ್ಲಿ ಹೋಗಿ ವಿವರಣೆ ನೀಡಿದ್ದಾರೆ. ಕರಾವಳಿ ಕಾವಲು ಪಡೆಯ ಕಾರವಾರ ಠಾಣೆ ಇನ್ಸ್ಪೆಕ್ಟರ್ ನಿಶ್ಚಲಕುಮಾರ ಕೂಡ ಇದ್ದರು. ಸ್ಥಳ ಭೇಟಿ ಬಳಿಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಹಲವು ವಿಚಾರ ಚರ್ಚೆಯಾಗಿದೆ. ಅಂತಿಮವಾಗಿ ಸ್ಥಳೀಯ ಮೀನುಗಾರರ ಸಮಸ್ಯೆಯನ್ನೂ ಆಲಿಸಲು ಅಧಿಕಾರಿಗಳು ಒಪ್ಪಿದರು ಎಂದು ಮಾಹಿತಿ ನೀಡಿದರು.

ಕದಂಬ ನೌಕಾನೆಲೆಯಲ್ಲಿ ವಿಕ್ರಮಾದಿತ್ಯ ನೌಕೆ ಸೇರಿ ದೇಶದ ಅನೇಕ ನೌಕೆಗಳು ಇರುವುದರಿಂದ ಭದ್ರತೆಗೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ನೌಕಾನೆಲೆ ಸಮುದ್ರ ಗಡಿಯಿಂದ ಒಂದು ಕಿ.ಮೀ. ದೂರದಲ್ಲಿ ಮೀನುಗಾರರು ಮೀನುಗಾರಿಕೆ ನಡೆಸಬೇಕು. ಗಡಿಯ ಹತ್ತಿರವೂ ಬರಬಾರದು. ಅದರಿಂದ ಭದ್ರತೆಗೆ ತೊಂದರೆ ಆಗುತ್ತದೆ ಎಂದು ನೌಕಾನೆಲೆ ಅಧಿಕಾರಿಗಳು ವಿವರಿಸಿದರು. ಭದ್ರತೆ ವಿಚಾರ ಏನೇ ಇದ್ದರೂ, ಅದರಿಂದ ಮೀನುಗಾರರಿಗೆ ತೊಂದರೆ ಆಗಬಾರದು.

ಸಮುದ್ರದಲ್ಲಿ ಹೆಚ್ಚಿನ ಮೀನು ಸಿಗುವ ಸ್ಥಳವೇ ಕಾರವಾರ, ಅಂಕೋಲಾ ಭಾಗದಲ್ಲಿದೆ. ಗಡಿಯಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮೀನುಗಾರರು ಬರಬಾರದು ಎಂದರೆ, ಮೀನು ಹಿಡಿಯುವುದಾದರೂ ಎಲ್ಲಿ? ಇದು ಸರಿಯಾದ ಕ್ರಮ ಅಲ್ಲ. ಮೀನುಗಾರರ ಸಮಸ್ಯೆ ಕೂಡ ಕೇಳಿ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದು ಉತ್ತಮ ಎಂದು ಸಲಹೆ ನೀಡಿದ್ದೇನೆ. ಅದಕ್ಕೆ ನೌಕಾನೆಲೆ ಅಧಿಕಾರಿಗಳು ಒಪ್ಪಿದ್ದಾರೆ ಎಂದು ವಿನಾಯಕ ಹರಿಕಂತ್ರ ತಿಳಿಸಿದರು. ಮೀನುಗಾರ ಮುಖಂಡರಿಗಿಂತ ಹೆಚ್ಚಾಗಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಮೀನುಗಾರರ ಸಮಸ್ಯೆ ಕೇಳಲು ಹೇಳಿದ್ದೇನೆ. ಒಂದು ವಾರದ ನಂತರ ಪ್ರತಿ ಊರಿನಿಂದ ಐವರು ಮೀನುಗಾರರ ಜೊತೆ ಸಭೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವಿನಾಯಕ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು