ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಸೀಗೂಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ 69 ಮಂದಿಗೆ ಕೊರೋನಾ ದೃಢಪಟ್ಟಿದ್ದು ವಿದ್ಯಾಲಯವನ್ನು ಸೀಲ್‍ಡೌನ್ ಮಾಡಲಾಗಿದೆ.ವಿದ್ಯಾಲಯದಲ್ಲಿ 457 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಲ್ಲರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು.
ಸೋಂಕು ಲಕ್ಷಣ ಇರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು ವೈದ್ಯರು ನಿಗಾ ವಹಿಸಿದ್ದಾರೆ. ವಿದ್ಯಾಲಯಕ್ಕೆ ಜಯಪುರ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಡಾ: ಸುೀಂದ್ರ, ಬಾಳೆಹೊನ್ನೂರಿನ ಡಾ.ಪ್ರವೀಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾನುವಾರ ಸಂಜೆಯ ವೇಳೆಗೆ 59 ವಿದ್ಯಾರ್ಥಿಗಳು ಹಾಗೂ ಪ್ರಿನ್ಸಿಪಾಲ್ ಸೇರಿದಂತೆ 9 ಸಿಬ್ಬಂದಿಗೆ ಸೋಂಕು ಧೃಡ ಪಟ್ಟಿದೆ. ವಿದ್ಯಾಲಯದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಇಲ್ಲಿನ ಪರಿಸ್ಥಿತಿ ಕುರಿತು ಪೋಷಕರಿಗೆ ಮಾಹಿತಿ ನೀಡಲಾಗಿದ್ದು ಯಾರೂ ಆತಂಕಪಡುವ ಅಗತ್ಯ ಇಲ್ಲ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.
ವಿದ್ಯಾಲಯಕ್ಕೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಭೇಟಿ ನೀಡಿ ಇಷ್ಟೊಂದು ಮಂದಿಗೆ ಕೋವಿಡ್ ದೃಢ ಪಟ್ಟಿರುವುದು ಆಶ್ಚರ್ಯ. ತುರ್ತು ಸ್ಥಿತಿ ಉಂಟಾದಲ್ಲಿ ಮುಂಜಾಗ್ರತಾ ಕ್ರಮವಾಗಿ 10 ಆಮ್ಲಜನಕ ಸಾಂದ್ರಕ, ಪಲ್ಸ ಮೀಟರ್, ಪಿಪಿಇ ಕಿಟ್‍ಗಳನ್ನು ವಿದ್ಯಾಲಯದಲ್ಲಿ ತಂದು ಇರಿಸಲು ಸೂಚಿಸಿದರು.
ವಿದ್ಯಾಲಯದಲ್ಲಿ ಕ್ಲಿನಿಕ್ ಆರಂಭಿಸಲಾಗಿದೆ. ಸರ್ಕಾರದ ಕಡೆಯಿಂದ ಏನಾದರೂ ಅವಶ್ಯಕತೆ ಬಿದ್ದಲ್ಲಿ ಅದು ತಕ್ಷಣ ನೀಡಲಾಗುತ್ತದೆ. ಇಲ್ಲಿ ಅಗತ್ಯತೆ ಕುರಿತು ಜಿಲ್ಲಾಧಿಕಾರಿ ಹಾಗೂ ಸಚಿವರ ಜೊತೆ ಚರ್ಚಿಸುತ್ತೇನೆ ಎಂದರು.
ವಿದ್ಯಾಲಯದ ಇಡೀ ಪರಿಸರವನ್ನು ಸ್ಯಾನಿಟೈಸರ್ ಮಾಡಲಾಗಿದ್ದು ಜಿಲ್ಲಾಯ ವಿವಿಧ ಭಾಗಗಳಿಂದ ಪೋಷಕರು ಆತಂಕದಲ್ಲಿ ವಿದ್ಯಾಲಯಕ್ಕೆ ಬಂದು ಗೇಟಿನ ಹೊರಗಡೆಯಿಂದಲೇ ಮಕ್ಕಳ ಆರೋಗ್ಯ ವಿಚಾರಿಸುತ್ತಿದ್ದರು. ಹಲವು ಪೋಷಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವ ಇಂಗಿತ ವ್ಯಕ್ತಪಡಿಸಿದ್ದು ವೈದ್ಯರು ಅದಕ್ಕೆ ಅವಕಾಶ ನೀಡಿಲ್ಲ.
ವೈದ್ಯರು, ನರ್ಸ್ ಸೇರಿದಂತೆ 15 ಮಂದಿ ಆರೋಗ್ಯ ಸಿಬ್ಬಂದಿ ಗಳನ್ನು ಜವಾಹರ್ ನವೋದಯ ವಿದ್ಯಾಲಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ: ಉಮೇಶ್ ಈ ಸಂಜೆ ಗೆ ತಿಳಿಸಿದರು. ಕಳೆದ ಕೆಲವು ದಿನಗಳಿಂದ ಜಿಲ್ಲಾಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗಿತ್ತು. ಒಂದೇ ಬಾರಿ ಈ ಮಟ್ಟದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಜನತೆ ಆತಂಕಕ್ಕೊಳಗಾಗಿದ್ದಾರೆ.