ಚಿಕ್ಕಮಗಳೂರು: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಸಿ ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕು ಎಂಬ ರಾಜಕೀಯ ಹಠ ನನ್ನಲ್ಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 90ರ ಜೀವನದ ಕೊನೆ ಹಂತದಲ್ಲಿ ರಾಜ್ಯದಲ್ಲಿಪ್ರಾದೇಶಿಕ ಪಕ್ಷ ಉಳಿಸಿ ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕು ಎಂಬ ರಾಜಕೀಯ ಹಠ ನನ್ನಲ್ಲಿದೆ.
ಜೀವನದ ಕೊನೆಘಟ್ಟದಲ್ಲಿ ದೇವೇಗೌಡರು ಒಂದು ಮತ ಕೇಳಿದರೂ ಕೊಡೋಣ ಎಂಬ ಉಪಕಾರದ ಭಾವನೆ ಜನರಲ್ಲಿ ಬಂದಲ್ಲಿ 2023ರ ಚುನಾವಣೆಯಲ್ಲಿ ನಮ್ಮ ಸರಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೇ. 13 ರಂದು ಬೆಂಗಳೂರಿನಲ್ಲಿ ನಡೆಯುವ ಜಲಧಾರೆ ಸಮಾರೋಪದ ಬಳಿಕ ನನ್ನ ಹೋರಾಟ ಆರಂಭಿಸುತ್ತೇನೆ. ತಿಂಗಳಿಗೆ 2 ವಿಧಾನಸಭಾ ಕ್ಷೇತ್ರಕ್ಕೆ ಭೇಟಿಯಾಗಿ ಪಕ್ಷ ಕಟ್ಟುತ್ತೇನೆ. ಇದು ನನ್ನ ಕೊನೆ ಹೋರಾಟ ಎಂದು ಮನೆ ಮನೆಗೆ ಹೋಗಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.