ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಂದು ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮವಾಗಿ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಯವರೆಗಿನ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿತ್ತು. ಇದೀಗ ಮತ್ತೆ ರಜೆಯನ್ನು ಜುಲೈ.9ರವರೆಗೆ ವಿಸ್ತರಿಸಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ ತೀವ್ರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಭಿಪ್ರಯಾದಂತೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ, ಕಳಸ ತಾಲೂಕು ಹಾಗೂ ಶೃಂಗೇರಿ ವ್ಯಾಪ್ತಿಯಲ್ಲಿನ ಶೈಕ್ಷಣಿಕ ವಿದ್ಯಾಸಂಸ್ಥೆಗಳಿಗೆ ( ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಂಸ್ಥೆ ) ದಿನಾಂಕ 06-07-2022ರಂದು ರಜೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಮಳೆಯು ನಿರಂತರವಾಗಿ ಬೀಳುತ್ತಿರುವದರಿಂದ ಮಲೆನಾಡು ಭಾಗದ ಶೈಕ್ಷಣಿಕ ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ 06-07-2022ರಿಂದ ದಿನಾಂಕ 09-07-2022ರವರೆಗೆ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಆಂಬಳೆ ಹಾಗೂ ಲಕ್ಕಾ ಹೋಬಳಿ ಹೊರತು ಪಡಿಸಿದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ ಮತ್ತು ಎನ್ ಆರ್ ಪುರ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.