ಚಿಕ್ಕಮಗಳೂರು: ತಾಲ್ಲೂಕಿನ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಸಿಪಿಐ ಹಾಗೂ ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘದ ಚಳುವಳಿ ಇಂದಿಗೆ ನಾಲ್ಕನೇ ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾಸುಂದ್ರೇಶ್ ಎಚ್ಚರಿಸಿದರು.
ಪ್ರತಿಭಟನಾ ವೇಳೆಯಲ್ಲಿ ಮಾತನಾಡಿದ ಅವರು ಕಳೆದ ನಾಲ್ಕು ದಿನಗಳಿಂದ ಕೂಲಿಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳಾಗಲೀ ಪ್ರಶ್ನಿಸದೇ ತಮ್ಮ ಪಾಡಿಗೆ ಇರುವುದು ವ್ಯಕ್ತವಾಗುತ್ತಿದ್ದು ನಂತರ ಉಗ್ರವಾದ ಚಳುವಳಿ ನಡೆಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ, ತಹಶೀ ಲ್ದಾರ್‌ರವರು ಪ್ರತಿಭಟನೆ ನಡೆಸುತ್ತಿದ್ದವವರ ಸ್ಥಳಕ್ಕೆ ಭೇಟಿ ನೀಡದೇ ಸುಖಸುಮ್ಮನೆ ಕೆಲಸ ಮಾಡುತ್ತಿದ್ದಾರೆ. ಭಾರತದ ದೇಶದ ಪ್ರಜೆಗಳಾದ ನಿವಾಸಿಗಳಾದ ನಿವೇಶನ ರಹಿತರಿಗೆ ನಿವೇಶನವನ್ನು ಒದಗಿಸುವಲ್ಲಿ ವಿಳಂಭ ಧೋರಣೆ ತಾಳಿರುವುದು ಸರಿಯಾದ ವಿಚಾರ ಎಂದು ದೂರಿದರು.
ಬಿಜೆಪಿ ವಕ್ತಾರರಂತೆ ಜಿಲ್ಲಾ ದಂಡಾಧಿಕಾರಿಗಳು ಕಾರ್ಯನಿರ್ವ ಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸ್ವಾತಂತ್ರ್ಯ ಬಂದು ೭೫ವರ್ಷ ಕಳೆದರೂ ಇಲ್ಲಿನ ನೂರಾರು ಕೂಲಿಕಾರ್ಮಿಕರು ಸರ್ಕಾರದ ಭೂಮಿಯನ್ನು ನಿವೇ ಶನಕ್ಕಾಗಿ ಒತ್ತಾಯಿಸಿದ್ದಾರೆಯೇ ಹೊರತು ಬಂಗಾಲೆ ನಿರ್ಮಿಸಿ ಕೊಡಿ ಎಂದು ಕೇಳುತ್ತಿಲ್ಲ. ಇದನ್ನು ಜಿಲ್ಲಾ ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಅರಿತುಕೊಂಡು ಸಮಸ್ಯೆ ಬಗೆಹರಿಸುವಲ್ಲಿ ಮುಂದಾಗಬೇಕು ಎಂದರು.
ಇದೇ ರೀತಿ ಕಾರ್ಮಿಕರನ್ನು ನಿರ್ಲಕ್ಷ್ಮಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾದರೆ ನಂತರ ಚಳುವಳಿ ರೂಪ ಬದಲಾಗಲಿದ್ದು ಒಂದು ತಂಡ ಉಪವಾಸ ಸತ್ಯಾಗ್ರಹ ನಡೆಸಿದರೆ ಇನ್ನೊಂದೆಡೆ ಎಲ್ಲಾ ತಾಲ್ಲೂಕು ಸಂಘದಿಂದ ರ್‍ಯಾಲಿಗಳ ಮೂಲಕ ಜಿಲ್ಲಾ ಹಾಗೂ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಕೆಲಸ ಮಾಡಲಾಗುವುದು ಎಂದು ಎಚ್ಚರಿಸಿದರು.
ನಂತರ ಒಂದೊಂದು ದಿನವು ಆಯಾ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಪಂಚಾಯಿತಿಗೆ ಬೀಗ ಹಾಕುವ ಮೂಲಕ ಬಂದ್ ಮಾಡಿಸಿ ಪ್ರತಿಭಟನೆ ನಡೆಸಲಾಗುವುದು. ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸದಿದ್ದಲ್ಲಿ ಸಿಪಿಐ ಹಾಗೂ ಕಟ್ಟಡ ಕಾರ್ಮಿಕರ ಸಂಘದಿಂದ ಕೂಲಿ ಕಾರ್ಮಿಕರಿಗೆ ನ್ಯಾಯ ದೊರೆಯುವವರೆಗೂ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಪಕ್ಷದ ನಗರ ಕಾರ್ಯದರ್ಶಿ ವಸಂತ್‌ಕುಮಾರ್ ಮಾತನಾಡಿ ಪ್ರತಿಭಟನೆಯು ಮೊದಲನೇ ದಿನದಲ್ಲಿ ಕಡವಂತಿ, ಎರಡನೇ ದಿನ ಬೆಳಗುಳ, ಮೂರನೇ ದಿನ ಮಲ್ಲಂದೂರು, ನಾಲ್ಕನೇ ದಿನವಾದ ಇಂದು ಆಲ್ದೂರು ನಿವೇಶನ ರಹಿತರು ಪ್ರತಿಭಟನೆ ನಡೆಸುತ್ತಿದ್ದು ಐದನೇ ದಿನಕ್ಕೆ ಬಣಕಲ್ ಗ್ರಾಮಸ್ಥರು ಬರಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಖಜಾಂಚಿ ಹೆಚ್.ಎಂ.ರೇಣುಕಾರಾಧ್ಯ, ಸಹ ಕಾರ್ಯದರ್ಶಿ ಜಿ.ರಘು, ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ಸೋಮೇಗೌಡ ಆಲ್ದೂರು ಗ್ರಾಮಸ್ಥರಾದ ರವಿ, ಹೆಡದಾಳು ಕುಮಾರ್ ಮತ್ತಿತರರು ಹಾಜರಿದ್ದರು.