ತರೀಕೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಡವರ ಬದುಕಿಗೆ ಭದ್ರತೆ ಮತ್ತು ವಿಮೆಯನ್ನು ಒದಗಿಸಿದ್ದಾರೆ ಎಂದು ಕರ್ನಾಟಕ ಸರ್ಕಾರದ ಗೃಹಮಂತ್ರಿ ಆರಗ ಜ್ಞಾನೇಂದ್ರ ಹೇಳಿದರು.
ಅವರು, ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಏರ್ಪಾಡಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಡಿದರು.
ಈ ದೇಶದಲ್ಲಿ ಬಡತನ ದುರುಪಯೋಗವಾಗಿದೆ. ರೈತರು ಬೆಳೆದ ಬೆಳೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಮೆ ಕಂಡುಹಿಡಿದಿದ್ದಾರೆ. ರೈತರು ಹತಾಶರಾಗುವುದು ಬೇಡ, ರೈತರಿಗೆ ೫ ಲಕ್ಷ ದವರೆಗೆ ಬಡ್ಡಿರಹಿತವಾಗಿ ಸಾಲ ಕೊಡುವ ಯೋಜನೆಯನ್ನು ತರಲಾಗಿದೆ. ರೈತರಿಗೆ ಇದು ಶಕ್ತಿ ಕೊಡುತ್ತದೆ. ನರೇಂದ್ರ ಮೋದಿಯವರಿಂದಾಗಿ ಭಾರತವನ್ನು ಜಗತ್ತು ತಿರುಗಿ ನೋಡುವ ಹಾಗೆ ಆಗಿದೆ. ಭಾರತದ ಶಕ್ತಿ ಹೆಚ್ಚಾಗಿದೆ. ನಾವು ಹೆಮ್ಮೆ ಪಡಬೇಕು. ರಾಷ್ಟ್ರವನ್ನು ಇನ್ನಷ್ಟುಗಟ್ಟಿಯಾಗಿ ಕಟ್ಟಬೇಕು. ಇಂತಹ ಸರ್ಕಾರವನ್ನು ಮತ್ತೊಮ್ಮೆ ಚುನಾಯಿಸಬೇಕು ಎಂದು ಅವರು ಮನವಿ ಮಾಡಿದರು.
ವಿಧಾನ ಪರಿಷತ್ತು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಮಾತನಾಡಿ, ಐವತ್ತು ಸಾವಿರಕ್ಕೂ ಹೆಚ್ಚು ಅತ್ಯಧಿಕ ಮತಗಳಿಂದ ಸುರೇಶ್ ಅವರನ್ನು ಗೆಲ್ಲಿಸಿ ಎಂದು ಅವರು ಮನವಿ ಮಾಡಿ ವಿಜಯ ಸಂಕಲ್ಪ ಯಾತ್ರೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಅವರು ಸರ್ವರಿಗೂ ಅಭಿನಂದನೆಗಳನ್ನು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರು, ಶಾಸಕ ಡಿ.ಎಸ್.ಸುರೇಶ್ ಅವರು ಮಾತನಾಡಿ, ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಸಂದರ್ಭದಲ್ಲಿ ೧೭ ಲಕ್ಷ ರು.ಗಳ ವೆಚ್ಚದಲ್ಲಿ ಆಕ್ಸಿಜನ್ ಘಟಕ, ಸುಸಜ್ಜಿತವಾದ ಪ್ರಯೋಗಾಲ ಯವನ್ನು ಸ್ಥಾಪಿಸಲಾಗಿದೆ, ಪಟ್ಟಣದಲ್ಲಿ ಸುಸಜ್ಜಿತವಾದ ತಾಯಿ ಮಗು ಆಸ್ಪತ್ರೆ ನಿರ್ಮಾಣವಾಗುತ್ತದೆ, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂದು ತಾಲೂಕಿನ ಪ್ರತಿ ಸ್ತ್ರೀ ಶಕ್ತಿಸಂಘಗಳಿಗೆ ಒಂದರಿಂದ ಒಂದುವರೆ ಲಕ್ಷ ರು.ಗಳ ಅರ್ಥಿಕ ನೆರವನ್ನು ವಿತರಿಸಲಾಗಿದೆ. ಭದ್ರಾ ಜಲಾಶಯದಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದರು. ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ನಿರ್ದೇಶಕ ಕೆ.ಆರ್.ಆನಂದಪ್ಪ, ಪಕ್ಷದ ಕಾರ್ಯಕರ್ತರು ಮತ್ತಿತರರು ಬಿ.ಜೆ.ಪಿ.ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಟ್ಟಣದ ಎ.ಪಿ.ಎಂ.ಸಿ.ಆವರಣದಿಂದ ಮಹಾತ್ಮಾ ಗಾಂಧಿ ವೃತ್ತದವರಿಗೆ ಬಿ.ಜೆ.ಪಿ.ವಿಜಯ ಸಂಕಲ್ಪ ಯಾತ್ರೆಯನ್ನು ಏರ್ಪಡಿಸಲಾಗಿತ್ತು, ವಿಜಯ ಸಂಕಲ್ಪ ಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.