ಚಿಕ್ಕಮಗಳೂರು: ಭೂಮಿ, ವಸತಿ ಕೊಡದೆ – ನಮ್ಮ ಓಟು ಕೊಡೆವು ಎಂಬ ಘೋಷಣೆಯಡಿ ಕರ್ನಾಟಕ ಜನಶಕ್ತಿ ವತಿಯಿಂದ ಮಾ.೨೮ರಂದು ಜಾಗೃತಿ ಜಾಥಾ ಹಾಗೂ ಮಲೆನಾಡು ಜನರ ಬೃಹತ್ ಆಗ್ರಹ ಸಮಾವೇಶವನ್ನು ನಗರದ ಎಐಟಿ ಕಾಲೇಜು ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜನಶಕ್ತಿ ಸಂಘಟನೆಯ ಮುಖಂಡ ಕೆ.ಎಲ್.ಅಶೋಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾವೇಶದಲ್ಲಿ ವಸತಿ ಹಕ್ಕಿಗಾಗಿ ೯೪ಸಿ, ೯೪ಸಿಸಿ ಅಡಿಯಲ್ಲಿ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದು ಈ ಕೂಡಲೇ ಅರ್ಹರ ಮನೆಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಲಾಗುವುದು.
ಗ್ರಾಮ ಪಂಚಾಯಿತಿಗಳು ವಸತಿಗಾಗಿ ಮೀಸಲಿಟ್ಟಿರುವ ಜಾಗಗಳನ್ನು ಈ ಕೂಡಲೇ ವಸತಿವಂಚಿತರಿಗೆ ಹಂಚಬೇಕು ಮತ್ತು ತಕ್ಷಣವೇ ಮನೆಗಳನ್ನು ನಿರ್ಮಿಸಬೇಕು. ಬದುಕಿಗಾಗಿ ಸಾಗುವಳಿ ಮಾಡಿಕೊಂಡ ಮಲೆನಾಡಿನ ರೈತರ ಸಾಗುವಳಿ ಭೂಮಿಗೆ ಹಕ್ಕುಪತ್ರ ಕೊಡಬೇಕು.
ಮಲೆನಾಡಿನ ರೈತಾಪಿ ವರ್ಗವನ್ನು ಬಾಧಿಸುತ್ತಿರುವ ಕೊಳೆರೋಗ ಹಾಗೂ ಎಲೆಚುಕ್ಕೆ ರೋಗದ ಬಗ್ಗೆ ಸಂಶೋಧನೆಗಳನ್ನು ನಡೆಸುವ ಜೊತೆ ಗೆ ರೈತರಿಗೆ ಸೂಕ್ತ ಪರಿಹಾರ ಹಾಗೂ ಕೂಲಿಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳನ್ನು ಮೇಲ್ದರ್ಜೇಗೇರಿಸಬೇಕು ಮತ್ತು ಸರ್ಕಾರಿ ಶಾಲೆ ಗಳನ್ನು ಅಭಿವೃದ್ದಿಪಡಿಸಬೇಕು.
ಕೊಟ್ಟಿಗಟ್ಟಲೇ ಹಣ ತುರಿದು ರಸ್ತೆ ಮಾಡುವ ಪರಿಸರ ವಿರೋಧಿ ಅಭಿ ವೃದ್ದಿ ಕ್ರಮಗಳನ್ನು ಕೈಬಿಡಬೇಕು. ಆ ಹಣದಲ್ಲೇ ಎಲ್ಲಾ ಹಳ್ಳಿಗಳ ರಸ್ತೆಗಳ ನ್ನು ಸರಿಪಡಿಸಬೇಕು ಎಂದು ಸಮಾ ವೇಶದಲ್ಲಿ ಒತ್ತಾಯಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಗೌಸ್ ಮೊಹಿಯುದ್ದೀನ್, ಟಿ.ಎಲ್.ಗಣೇಶ್ ಉಪಸ್ಥಿತರಿದ್ದರು.