ಚಿಕ್ಕಮಗಳೂರು: ಇಂದಿನ ಪೀಳಿಗೆ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಂಕರದೇವರ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಆರದವಳ್ಳಿಯಲ್ಲಿ ನಗರದ ಸಂತಜೋಸೇಫರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ದೇಶದಲ್ಲಿಂದು ಸಾಕ್ಷರರ ಸಂಖ್ಯೆ ಹೆಚ್ಚಿದೆ. ಆದರೆ, ಜನರಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಅನುಕಂಪ, ಸೇವಾ ಮನೋಭಾವ ಮರೆಯಾಗಿದೆ. ಇದರಿಂದಾಗಿ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ ಎಂದು ವಿಷಾದಿಸಿದರು.
ಇಂದಿನ ಯುವಜನತೆ ಪ್ರೀತಿ, ವಿಶ್ವಾಸ ,ಕರುಣೆ, ಅನುಕಂಪ ಮೈಗೊಡಿಸಿಕೊಳ್ಳಬೇಕು. ಅನಾಥರು, ಅಶಕ್ತರು, ಗುರು-ಹಿರಿಯರು ಮತ್ತು ಸಮಾಜದ ಸೇವೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಯುವ ಪೀಳಿಗೆ ಪ್ರೀತಿ, ಅನುಕಂಪ, ಕರುಣೆ, ಮೈಗೂಡಿಸಿಕೊಂಡು ಸೇವಾ ಮನೋಭಾವವನ್ನು ಬೆಳೆಸಿಕೊಂಡಲ್ಲಿ ಆರೋಗ್ಯವಂತ ಸಮಾಜದ ನಿರ್ಮಾಣವಾಗುತ್ತದೆ. ಯುವಜನತೆ ಈ ಸತ್ಯವನ್ನು ಅರಿಯಬೇಕು ಎಂದು ಹೇಳಿದರು.
ಕಾಲೇಜಿನ ಕಾರ್ಯದರ್ಶಿ ಫಾದರ್ ವಿಜಯ್‌ಕುಮಾರ್ ಮಾತನಾಡಿ ,ಯುವಜನತೆ ಸಮಾಜ ಸೇವೆಯನ್ನು ಉಸಿರನ್ನಾಗಿ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂತಜೋಸೆಫರ ಪ್ರಥಮ ದರ್ಜೆ ಕಾಲೇಜು ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನೂ ಬೆಳೆಸುವ ಕೆಲಸ ಮಾಡುತ್ತಿದೆ. ಯುವಜನತೆಯನ್ನು ಸೇವೆಗೆ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್‌ಕಾರ್ಡೋಜ, ಶಿಬಿರದಲ್ಲಿ ಒಂದು ವಾರ ಕಾಲ ವಿದ್ಯಾರ್ಥಿಗಳು ಗ್ರಾಮದ ಸ್ವಚ್ಛತೆ ಸೇರಿದಂತೆ ಸೇವಾ ಕಾರ್ಯಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಿದ್ದಾರೆ ಎಂದು ತಿಳಿಸಿದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ್ ,ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್, ಗ್ರಾಮದ ಮುಖಂಡರಾದ ಕಲ್ಲೇಗೌಡ, ಸಣ್ಣೇಗೌಡ, ಉಮೇಶ್, ಶಿವರಾಜ್, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯ ಕ್ರಮಾಧಿಕಾರಿ ವಿನಯ್‌ಕುಮಾರ್, ಸುಶ್ಮಿತಾ ಡಿಸೋಜ ಉಪಸ್ಥಿತರಿದ್ದರು.