ಶಿವಮೊಗ್ಗ: ಕುಖ್ಯಾತ ರೌಡಿ ಸೈಲೆಂಟ್ ಸುನೀಲ ಬಿಜೆಪಿ ಮುಖಂಡರ ಜೊತೆ ಇದ್ದರೆ ಅವನನ್ನು ಅರೆಸ್ಟ್ ಮಾಡುವ ಧೈರ್ಯ ಸಿಸಿಬಿ ಪೊಲೀಸರಿಗೆ ಹೇಗೆ ಬರುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವನ್ಯಾವನೋ ಒಬ್ಬ ಸುನೀಲನ ಜೊತೆ ಸೂರ್ಯ, ಮೋಹನ್ ಅವರೆಲ್ಲಾ ಹೋಗಿದ್ದಾರೆ. ಡಕಾಯಿತಿ, ಕೊಲೆ ಕೇಸ್ನಲ್ಲಿ ಇದ್ದವನ ಜೊತೆ ಇಬ್ಬರು ಎಂಪಿಗಳು, ಬಿಜೆಪಿ ನಾಯಕರು ಇದ್ದಾರೆ.
ಸಿಸಿಬಿಯವರು ಸೈಲೆಂಟ್ ಸುನೀಲನ ಹುಡುಕುತ್ತಾ ಇದ್ದರೆ. ಅವನು ಬಿಜೆಪಿ ಮುಖಂಡರ ಜೊತೆಗೆ ಇದ್ದಾನೆ. ಆಡಳಿತ ಪಕ್ಷದ ಶಾಸಕರು, ಸಂಸದರು ಅವರ ಜೊತೆಗಿದ್ರೆ ಪೊಲೀಸರು ಹೇಗೆ ಅರೆಸ್ಟ್ ಮಾಡುತ್ತಾರೆ. ಕಾನೂನು ಕ್ರಮ ಕೈಗೊಳ್ಳೋಕೆ, ಶಿಕ್ಷೆ ಕೊಡಿಸೋಕೆ ಆಗುತ್ತಾ ? ಎಂದು ಪ್ರಶ್ನಿಸಿದರು.
ಮೊಹಮ್ಮದ್ ನಲಪಾಡ್ ಮೇಲೆ ಒಂದು ಕೇಸ್ ಇದೆ. ಆದರೆ, ಬಿಜೆಪಿ ನಾಯಕರ ಮೇಲೆ ಎಷ್ಟು ಕ್ರಿಮಿನಲ್ ಕೇಸ್ಗಳಿವೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ಅಮಿತ್ ಶಾ ಅವರೇ ಕೊಲೆ ಪ್ರಕರಣದಲ್ಲಿ ಇದ್ದರು. ಅವರ ವಿರುದ್ಧ ಗಡಿಪಾರು ಆದೇಶವಿತ್ತು. ಹೀಗಾಗಿ ನಲಪಾಡ್ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಏನು ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.
ನಲಪಾಡ್ ಮೇಲೆ ಕ್ರಿಮಿನಲ್ ಕೇಸ್ ಆಗಿತ್ತು ಅಷ್ಟೇ. ನಲಪಾಡ್ ರೌಡಿ ಅಲ್ಲ, ರೌಡಿಶೀಟರ್ ಕೂಡ ಅಲ್ಲ. ಕೇಸ್ ಪ್ರೂ ಆಗಿ ಶಿಕ್ಷೆ ಆಗಿದ್ರೆ ಓಕೆ. ಬಿಜೆಪಿಯವರದ್ದು ಮೊಂಡತನ, ಭಂಡತನ. ಮಾನ ಮರ್ಯಾದೆ ಇಲ್ದೆ ಇರೋರಿಗೆ ಹಿಂಗೇ ಆಗೋದು ಎಂದು ಕಿಡಿಕಾರಿದರು.