ಶಿವಮೊಗ್ಗ: ಗ್ರಾಮಾಂತರ ಭಾಗವಾದ ಕುಂಚೇನಹಳ್ಳಿ ಗ್ರಾಮದ ಕಲ್ಲಾಪುರದ ಬಳಿ ಲಾರಿ ಮತ್ತು ಬೊಲೇನೋ ವಾಹನದ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ಬೊಲೆನೋ ವಾಹನದಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಮೂವರು ದಾವಣಗೆರೆಯ ಬಿಐಟಿ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಸಾವು ಕಂಡವರನ್ನ ಕಾರ್ತಿಕ್, ಮೋಹನ್ ಮತ್ತು ವಿವೇಕ್ ಎಂದು ಗುರುತಿಸಲಾಗಿದೆ. ಕಾರ್ತಿಕ್ ಬೊಲೆನೋ ವಾಹನವನ್ನ ಚಲಾಯಿಸುತ್ತಿದ್ದನು ಎಂದು ಕೇಳಿಬಂದಿದೆ. ಕಾರಲ್ಲಿದ್ದ ಮತ್ತೋರ್ವ ರುದ್ರೇಶ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಆತನನ್ನ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗಿದೆ.
ಇಂದು ಬೆಳಿಗ್ಗೆ 5-30 ರ ಸಮಯದಲ್ಲಿ ಶಿವಮೊಗ್ಗದಿಂದ ಸವಳಂಗ ಕಡೆಗೆ ಹೊರಟಿದ್ದ ಬೊಲೆನೋ ಕೆಎ 17 ಎಂಎ 3581 ಕ್ರಮ ಸಂಖ್ಯೆಯ ಬೊಲೆನೋ ಕಾರು ಎದುರಿನಿಂದ ಶಿವಮೊಗ್ಗ ಕಡೆ ಬರುತ್ತಿದ್ದ ಕೆಎ 27 ಸಿ-3924 ಕ್ರಮ ಸಂಖ್ಯೆಯ ಲಾರಿಗೆ ಗುದ್ದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.
ಮೂವರು ದಾವಣಗೆರೆಯಲ್ಲಿ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಎಂದು ಹೇಳಲಾಗುತ್ತಿದೆ. ಗಾಯಾಳು ರುದ್ರೇಶ್ ಬಿಐಟಿ ಕಾಲೇಜಿನ ಸಿವಿಲ್ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದಾನೆ. ಸಾವುಕಂಡ ಮೂವರಿಗೂ 20 ವರ್ಷದ ಒಳಗಿನವರು ಎಂದು ಅಂದಾಜಿಸಲಾಗಿದೆ.
ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಮ್ ಅಮಾತೆ, ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಅಭಯ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.