ಶಿವಮೊಗ್ಗ: ಶಿವಮೊಗ್ಗ – ಸಾಗರ ಹೆದ್ದಾರಿಯ ಚೋರಡಿ ಬಳಿ ಕುಮದ್ವತಿ ಸೇತುವೆ ಸಮೀಪ ಎರಡು ಬಸ್‌ಗಳ ನಡುವೆ ಡಿಕ್ಕಿ ಸಂಭವಿಸಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಅಪಘಾತಕ್ಕೀಡಾದ ಒಂದು ಬಸ್ಸು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿತ್ತು. ಮತ್ತೊಂದು ಬಸ್ಸು ಶಿಕಾರಿಪುರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು.
ಅಪಘಾತದಿಂದಾಗಿ ಶಿವಮೊಗ್ಗ – ಸಾಗರ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಎರಡು ಬದಿಯಲ್ಲಿ ಸುಮಾರು ಎರಡು ಕಿ.ಮೀ.ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಕುಂಸಿ ಮತ್ತು ಶಿವಮೊಗ್ಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ಕುಂಸಿ ಪೊಲೀಸರು ಹಾಗೂ ಶಿವಮೊಗ್ಗ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ, ಎರಡೂ ಬಸ್ಸುಗಳು ಒಂದಕ್ಕೊಂದು ಸೇರಿಕೊಂಡಿದ್ದು ಜೆಸಿಬಿ ಬಳಸಿ ಬಸ್ಸು ಬೇರ್ಪಡಿಸಿ ಬಸ್ಸುಗಳ ಮಧ್ಯೆ ಸಿಲುಕಿಕೊಂಡಿರುವ ಪ್ರಯಾಣಿಕರನ್ನೂ ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.