ಮೈಸೂರು: ಜಾಮೀನು ರಹಿತ ವಾರೆಂಟ್ ಹಿಡಿದು ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಮುಂದಾದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೇದೆಯ ಬೈಕನ್ನೇ ಸುಟ್ಟು ಹಾಕಿದ ಆರೋಪಿ ಪೊಲೀಸರ ವಶದಲ್ಲಿದ್ದಾಗ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದ ದೇವರಾಜ್ ಅಲಿಯಾಸ್ ಸುರೇಶ್(36) ಎಂಬಾತನೇ ಪೊಲೀಸ ವಶದಲ್ಲಿದ್ದಾಗಲೇ ಸಾವನ್ನಪ್ಪಿದ ಆರೋಪಿಯಾಗಿದ್ದು, ಈ ಸಂಬಂಧ ಎಸ್ಪಿ ನೇತೃತ್ವದಲ್ಲೇ ಪ್ರಕರಣ ತನಿಖೆ ನಡೆಯುತ್ತಿದೆ. ಇದೊಂದು ಪೊಲೀಸರ ಲಾಕಪ್ ಡೆತ್ ಎಂದು ಗ್ರಾಮಸ್ಥರು ಇಂದು ಗ್ರಾಮದಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ.
ಪ್ರಕರಣಗಳ ಆರೋಪಿಯನ್ನು ಬಂಧಿಸಲು ವಾರೆಂಟ್ ಸಮೇತ ಮನೆಗೆ ಬಂದ ಪೊಲೀಸ್ ಪೇದೆಗಳನ್ನೇ ಮಚ್ಚು ಹಿಡಿದು ಅಟ್ಟಾಡಿಸಿರುವ ಆರೋಪಿ ದೇವರಾಜ್ ನಿಂದ ಇಬ್ಬರು ಪೇದೆಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಈತನಿಂದ ತಪ್ಪಿಸಿಕೊಂಡು ಪೊಲೀಸರು ಪರಾರಿಯಾದರೆ, ಪೊಲೀಸರು ತಂದಿದ್ದ ದ್ವಿಚಕ್ರವಾಹವನ್ನು ಸುಟ್ಟು ಹಾಕಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ ದೇವರಾಜ್. ಈತನೊಟ್ಟಿಗೆ ತಾಯಿಯೂ ಸೇರಿಕೊಂಡು ಪೊಲೀಸರಿಗೆ ಕೊಡಲಿಯಿಂದ ಹೊಡೆಯಲು ಮುಂದಾಗಿದ್ದಾರೆ. ಕೊನೆಗೆ ಹಲ್ಲೆಗೊಳಗಾದ ಪೇದೆಗಳಿಬ್ಬರು ಠಾಣೆಗೆ ತಪ್ಪಿಸಿಕೊಂಡು ಹೋಗಿ ನಡೆದ ಘಟನೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದು, ವಿಷಯ ತಿಳಿದು ಹೆಚ್ಚುವರಿ ಸಿಬ್ಬಂದಿಗಳೊಂದಿಗೆ ಗ್ರಾಮಕ್ಕೆ ಆಗಮಿಸಿದ ಪೊಲೀಸರ ತಂಡ ಆರೋಪಿ ದೇವರಾಜ್ ಹಾಗೂ ಆತನ ತಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಸಂಜೆ ವೇಳೆಗೆ ತಾಯಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆದರೆ ಪೊಲೀಸರೊಟ್ಟಿಗಿನ ಜಗಳದಲ್ಲಿ ಅಸ್ವಸ್ಥಗೊಂಡಿದ್ದ ದೇವರಾಜ್ ಅನ್ನು ಕೆ.ಆರ್ ಆಸ್ಪತ್ರೆಗೆ ಕರೆತರುವ ಮಧ್ಯದಲ್ಲಿ ಅಸುನೀಗಿದ್ದಾನೆ.
ಮಚ್ಚು ಹಿಡಿದು ಪೇದೆಗಳ ಮೇಲೆ ಹಲ್ಲೆ ನಡೆಸಿ ಪೊಲೀಸರ ಸ್ಕೂಟರ್ಗೆ ಬೆಂಕಿ ಹಚ್ಚಿರುವ ಹಿನ್ನಲೆಯಲ್ಲಿ ಆತನನ್ನು ಹೆಚ್ಚುವರಿ ಪೊಲೀಸರೊಟ್ಟಿಗೆ ಠಾಣೆಗೆ ಎಳೆದೊಯ್ದ ಪೊಲೀಸರು ಠಾಣೆಯಲ್ಲೇ ಆತನ ಲಾಕಪ್ ಡೆತ್ ಮಾಡಿದ್ದಾರೆಂಬುದು ರತ್ನಪುರಿ ಗ್ರಾಮಸ್ಥರು ಆರೋಪವಾಗಿದೆ. ಅಲ್ಲದೆ ಸಂಜೆ ತಾಯಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗಲೇ ಈತನನ್ನು ಹಾಜರು ಪಡಿಸಲಿಲ್ಲವೇಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗಿದೆ, ಆದರೆ ಪೊಲೀಸರನ್ನು ಗ್ರಾಮದಿಂದ ಬಹಿಷ್ಕರಿಸಿರುವ ಜನರು ಪೊಲೀಸ್ ವ್ಯಾನ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸದ್ಯಕ್ಕೆ ಪ್ರಕರಣವನ್ನು ಖುದ್ಧ ಜಿಲ್ಲಾ ಪೊಲೀಸ್ ಎಸ್ಪಿ ಅಭಿನವ್ ಖರೆ ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರು ಯಾರೇ ಆದರೂ ಅವರಿಗೆ ಶಿಕ್ಷೆ ಕೊಡಿಸುವುದಾಗಿ ತಿಳಿಸಿದ್ದಾರೆ.