ಮೈಸೂರು: ಇಲ್ಲಿನ ವರುಣಾ ಹೋಬಳಿಯ ಕುಪ್ಪೆಗಾಲ ಗ್ರಾಮದ ಸವರ್ಣೀಯರ ದೇವಸ್ಥಾನಕ್ಕೆ ದಲಿತರು ಪ್ರವೇಶ ಮಾಡಿದ್ದಕ್ಕೆ ದೇವಾಲಯದೊಳಗೆ ಹೋಗುವುದನ್ನೇ ಸವರ್ಣಿಯರು ಬಹಿಷ್ಕರಿಸಿದರು.
ಈ ಗ್ರಾಮವು ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ ಗ್ರಾಮವಾಗಿದ್ದು, ಇಂತಹ ಊರಿನಲ್ಲಿ ದಲಿತ ಮಹಿಳೆ ಬಿಸಿಊಟ ಬಡಿಸುತ್ತಾಳೆ ಎಂಬ ಕಾರಣಕ್ಕೆ ಮಕ್ಕಳನ್ನೇ ಶಾಲೆಗೆ ಕಳುಹಿಸಿದ ಸವರ್ಣಿಯರು ಶಾಲೆಯನ್ನೇ ಬಹಿಷ್ಕರಿಸಿದ್ದರು.
ಇಂತಹ ಸಂದರ್ಭದಲ್ಲಿ ಸುಮಾರು 100 ವರ್ಷ ಹಳೆಯದಾದ ಪುರಾತನ ಮುಜರಾಯಿ ಇಲಾಖೆಗೆ ಸೇರಿದ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶಕ್ಕೆ ನಿರ್ಬಂಧವಿತ್ತು. ಇದನ್ನು ಪ್ರಶ್ನಿಸಿದ ಕೆಲ ದಲಿತ ಮುಖಂಡರು ಜಿಲ್ಲಾಡಳಿತ, ಮುಖ್ಯಮಂತ್ರಿ ಹಾಗೂ ಎಸ್ಪಿ ಅವರಿಗೆ ದೂರು ನೀಡಿ ಸಮಸ್ಯೆ ಬಗೆಹರಿಸುವಂತೆ ದೂರು ನೀಡಿದ್ದರು. ಇಂತಹ ಸಮಸ್ಯೆ ಆಲಿಸಿದ ಜಿಲ್ಲಾಡಳಿತ ದಲಿತ ಮತ್ತು ಸವರ್ಣೀಯ ಮುಖಂಡರ ನಡುವೆ ಶಾಂತಿ ಸಭೆ ನಡೆಸಿ 2014 ರ ಆಗಸ್ಟ್ 27 ರಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿತ್ತು. ನಂತರ ದಲಿತರು ದೇವಾಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲು ಪ್ರಾರಂಭಿಸಿದರು.
ಕುಪ್ಪೆಗಾಲದಲ್ಲಿ ಸುಮಾರು 250 ಸವರ್ಣಿಯರ ಕುಟುಂಬವಿದ್ದು, 1500 ಮಂದಿ ಜನಸಂಖ್ಯೆ ಇದ್ದಾರೆ. ದಲಿತರು ಆಂಜನೇಯ ಸ್ವಾಮಿ ದೇವಾಸ್ಥಾನ ಪ್ರವೇಶಿಸಿದ ಮೇಲೆ ಕಳೆದ ಒಂದು ವರ್ಷದಿಂದ ಯಾವುದೇ ಒಬ್ಬ ಸವರ್ಣಿಯರು ದೇವಾಸ್ಥಾನ ಪ್ರವೇಶಿಸಿಲ್ಲ. ಅಲ್ಲದೆ ದೇವರ ಹೆಸರಿನಲ್ಲಿ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಅದ್ಧೂರಿ ಮಾರಮ್ಮನ ಹಬ್ಬ ಸಹ ನಿಲ್ಲಿಸಿದ್ದಾರೆ. ಇದಿರಂದ ತಮ್ಮ ದೇವಾಲಯಕ್ಕೆ ತಾವೇ ಒಂದು ವರ್ಷದಿಂದ ಬಹಿಷ್ಕಾರ ಹಾಕಿಕೊಂಡಿದ್ದಾರೆ ಸವರ್ಣಿಯರು.
ಕುಪ್ಪೆಗಾಲ ಗ್ರಾಮದಲ್ಲಿ 200 ದಲಿತ ಕುಟುಂಬಗಳಿದ್ದು, ಸುಮಾರು 1 ಸಾವಿರ ದಲಿತರ ಜನಸಂಖ್ಯೆ ಇದೆ. ಪ್ರಾರಂಭದಲ್ಲಿ ದಲಿತರು ಉತ್ಸಾಹದಿಂದ ದೇವಾಲಯ ಪ್ರವೇಶಿಸಿದರು. ಆದರೆ ದಿನಕಳೆದಂತೆ ಭಯದಿಂದ ಯಾವ ದಲಿತ ಕುಟುಂಬಗಳು ದೇವಾಲಯಕ್ಕೆ ಹೋಗುತ್ತಿಲ್ಲ. ಈವಾಗ ಕೇವಲ ಇಬ್ಬರೇ ದಲಿತ ವ್ಯಕ್ತಿಗಳು ಮಾತ್ರ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ.
ಈ ಘಟನೆಯ ನಂತರ ಒಂದು ವರ್ಷದಿಂದ 2 ಬಾರಿ ಗ್ರಾಮಕ್ಕೆ ಆಗಮಿಸಿರುವ ಸಿಎಂ ಸಿದ್ಧರಾಮಯ್ಯ ದೇವಾಲಯಕ್ಕೆ ಹೋಗಿಲ್ಲ. ಆದರೆ ಘಟನೆಗಿಂತ ಹಿಂದೆ ಯಾವಾಗ ಬಂದರೂ ಕುಪ್ಪೆಗಾಲ ಗ್ರಾಮದ ಮುಖಂಡರ ಜತೆಗೂಡಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು.
ಹೀಗೆ ಸಿಎಂ ಆಡಿ ಬೆಳೆದು ಕಲಿತ ಗ್ರಾಮದಲ್ಲಿ ಸವರ್ಣಿಯರೇ ತಮ್ಮ ದೇವಾಲಯಕ್ಕೆ ಬಹಿಷ್ಕಾರ ಹಾಕಿರುವ ಘಟನೆ ಬಗ್ಗೆ ಸಿಎಂ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿ ಅನಾಥವಾಗಿರುವ ದೇವಾಲಯವನ್ನು ಎಲ್ಲರೂ ಒಂದೂ ಗೂಡಿ ಪೂಜೆ ಸುವ ಹಾಗೆ ಮಾಡುವರೇ ಎಂಬುದನ್ನು ಕಾದು ನೋಡಬೇಕಿದೆ.