News Kannada
Tuesday, July 05 2022

ಮೈಸೂರು

ಮೈಸೂರಲ್ಲಿ ವಿಮಾನ ನಿಲ್ದಾಣವಿದೆ.. ವಿಮಾನ ಹಾರಲ್ಲ.. - 1 min read

Photo Credit :

ಮೈಸೂರಲ್ಲಿ ವಿಮಾನ ನಿಲ್ದಾಣವಿದೆ.. ವಿಮಾನ ಹಾರಲ್ಲ..

ಮೈಸೂರು: ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಮತ್ತೆ ನೀರವ ಮೌನ ಆವರಿಸಿದೆ. ಮೈಸೂರಿಗೆ ವಿಮಾನ ಸೇವೆ ಬೇಕೆಂಬ ಆಗ್ರಹದಂತೆ ವಿಮಾನ ಹಾರಾಟದ ಸೌಲಭ್ಯ ಒದಗಿಸಿದರೂ  ಪ್ರಯಾಣಿಕರ ಕೊರತೆ ಹಾರಾಟ ನಿಲ್ಲಿಸುವಂತೆ ಮಾಡಿದೆ.

ಈಗಾಗಲೇ ಮೂರು ವಿಮಾನ ಸಂಸ್ಥೆಗಳಿಗೆ ಇದರ ಬಿಸಿ ತಟ್ಟಿದೆ. ಮೊದಲಿಗೆ 2010 ಅಕ್ಟೋಬರ್ 1ರಂದು ವಿಜಯ್ ಮಲ್ಯ ಒಡೆತನದ ಕಿಂಗ್ಫಿಶರ್ ವಿಮಾನ ಮೈಸೂರಿನಿಂದ ಬೆಂಗಳೂರು ಮೂಲಕ ಚೆನ್ನೈಗೆ ಹಾರಾಡುವುದರೊಂದಿಗೆ  ಮೈಸೂರಿಗರ ವಿಮಾನ ಹಾರಾಟದ ಕನಸನ್ನು ಉದ್ಯಮಿ ವಿಜಯ್ ಮಲ್ಯ ನನಸು ಮಾಡಿದ್ದರು.

ಆದರೆ ನಷ್ಟದ ಹಿನ್ನಲೆಯಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಯಿತು. 2013ರಲ್ಲಿ ಸ್ಪೈಸ್ ಜೆಟ್ ಮೈಸೂರಿನಿಂದ ಬೆಂಗಳೂರಿಗೆ ವಿಮಾನಸೇವೆ ನೀಡಲು ಮುಂದೆ ಬಂತು. ಪ್ರಯಾಣಿಕರ ಕೊರತೆಯೊಂದಿಗೆ ಸಂಚಾರ ನಡೆಸುವುದು ಸಾಧ್ಯವಾಗಲಿಲ್ಲ. ಆ ನಂತರ 2015ರ ಸೆಪ್ಟಂಬರ್ನಲ್ಲಿ ಏರ್ ಅಲಯನ್ಸ್ ಸೇವೆ ಆರಂಭಿಸಿ ಇದೀಗ ಸಂಚಾರ ಸ್ಥಗಿತಗೊಳಿಸಿದೆ.

ಇದರಿಂದ ಮೈಸೂರಿಗೆ ವಿಮಾನ ಸಂಚಾರ ಆರಂಭವಾದರೆ ಪ್ರವಾಸೋದ್ಯಮ ಬೆಳೆಯುತ್ತದೆ ಎಂಬ ಆಶಾಭಾವನೆಗೆ ಹೊಡೆತ ಬಿದ್ದಿದೆ. ಮೈಸೂರು ವಿಮಾನ ನಿಲ್ದಾಣ ಆರಂಭ ಹಾಗೂ ನಂತರದ ಬೆಳವಣಿಗೆಯನ್ನು ಗಮನಿಸುತ್ತಾ ಹೋದರೆ ಈ ನಿಲ್ದಾಣ ನಿರ್ಮಾಣವಾಗುವುದರೊಳಗೆ  ನೂರೆಂಟು ವಿಘ್ನಗಳು ಕಾಡಿರುವುದಂತು ನಿಜ. ಈಗಲೂ ಕೂಡ ಈ ವಿಮಾನ ನಿಲ್ದಾಣ ಸುರಕ್ಷವಲ್ಲ ಎಂಬ ವಾದವನ್ನು ಕೆಲವು ಸಂಘಸಂಸ್ಥೆಗಳು ಮಂಡಿಸುತ್ತಿವೆ. ಅದು ಆಚೆಗಿರಲಿ ಆದರೆ ಈ ವಿಮಾನಯಾನಕ್ಕೆ ಆಗಾಗ್ಗೆ ವಿಘ್ನಗಳು ಕಾಡುತ್ತಿರುವುದು ಮಾತ್ರ ಅಚ್ಚರಿಯ ಸಂಗತಿ.

ಮೈಸೂರು ನಗರದ ದಕ್ಷಿಣಕ್ಕೆ ನಂಜನಗೂಡಿಗೆ ತೆರಳುವ ರಸ್ತೆಯಲ್ಲಿ ಸುಮಾರು ಹತ್ತು ಕಿ.ಮೀ. ದೂರದಲ್ಲಿರುವ ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಹಾಗಾಗಿ ಮೈಸೂರು ವಿಮಾನ ನಿಲ್ದಾಣ ಎನ್ನುವ ಬದಲು ಹೆಚ್ಚಿನವರು ಮಂಡಕಳ್ಳಿ ವಿಮಾನ ನಿಲ್ದಾಣ ಎಂದು ಕರೆಯುವುದೇ ರೂಢಿಯಾಗಿದೆ. 1947ರಲ್ಲಿಯೇ ಅಂದಿನ ಮಹಾರಾಜರು ಸುಮಾರು 168 ಎಕರೆಯ  ಭೂಮಿಯನ್ನು ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ್ದರು. ಆ ನಂತರ 1950ರಲ್ಲಿ  ವಿಮಾನ ನಿಲ್ದಾಣ ಪ್ರಾರಂಭಿಸಲಾಯಿತು ಎಂದು ಹೇಳಲಾಗುತ್ತದೆ. ಆ ದಿನಗಳಲ್ಲಿ ದಸರಾ ಮಹೋತ್ಸವದ ಸಂದರ್ಭ ಮಾತ್ರ ವಿಮಾನ ವಿಹಾರ ನಡೆಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಅಂದರೆ 1958ರಲ್ಲಿ ನಾಲ್ಕು ಆಸನಗಳುಳ್ಳ ಲಘು ವಿಮಾನ ಇಲ್ಲಿ ಇಳಿಯುತ್ತಿತ್ತು.

ಈ ವಿಮಾನ ನಿಲ್ದಾಣವನ್ನು ವಿಸ್ತರಿಸುವ ಮೂಲಕ ದೊಡ್ಡ ವಿಮಾನಗಳು ಕೂಡ ಹಾರಾಡಲು ಅನುಕೂಲವಾಗುವಂತೆ ಅಭಿವೃದ್ಧಿಗೊಳಿಸಲು 2005ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಮತ್ತು ರಾಜ್ಯ ಸರ್ಕಾರದ ನಡುವೆ ಒಡಂಬಡಿಕೆ ಪತ್ರ (ಎಂಓಯು)ಕ್ಕೆ ಸಹಿ ಹಾಕಲಾಯಿತು. ಆ ನಂತರ ಕಾಮಗಾರಿಯೂ ಆರಂಭವಾಯಿತು. ಆದರೆ ಇದು ಆಮೆಗತಿಯಲ್ಲಿಯೇ ನಡೆಯತೊಡಗಿತು. ಈ ಸಂದರ್ಭ ಕೆಲವು ಸಂಘಟನೆಗಳು ನಿಲ್ದಾಣದ ಕಾರ್ಯವೈಖರಿಯ ವಿರುದ್ಧ ಪ್ರತಿಭಟನೆಗಳನ್ನು ಕೂಡ ನಡೆಸಿದ್ದವು. ಎಲ್ಲಾ ವೈರುಧ್ಯಗಳ ನಡುವೆಯೂ ವಿಮಾನ ನಿಲ್ದಾಣದ ಕಾಮಗಾರಿ ಮುಗಿದು 2010ರ ಮೇ 15ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಲ್ದಾಣವನ್ನು ಉದ್ಘಾಟಿಸಿದರು. ಆದರೆ ಮೈಸೂರಿಗೆ ವಿಮಾನ ಸಂಚಾರ ಆರಂಭಿಸಲು ಯಾವುದೇ ಖಾಸಗಿ ವಿಮಾನಯಾನ ಸಂಸ್ಥೆಗಳು ಮುಂದೆ ಬಂದಿರಲಿಲ್ಲ.

See also  ಮೈಸೂರಿನಲ್ಲಿ ಕೋವಿಡ್ ಲಸಿಕಾ ಅಣುಕು ಕಾರ್ಯಾಚರಣೆ

ಆ ನಂತರ ಸುಮಾರು ಐದು ತಿಂಗಳ ಬಳಿಕ ವಿಜಯಮಲ್ಯ ದಸರಾ ಸಂದರ್ಭ ಪ್ರಥಮ ಬಾರಿಗೆ ವಿಮಾನ ಸಂಚಾರ ಆರಂಭಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಹಾರಾಟ ನಡೆಸಿದ ಎಲ್ಲ ಸಂಸ್ಥೆಗಳು ನಷ್ಟದ ಕಾರಣ ನೀಡಿ ಸೇವೆಯನ್ನು ಸ್ಥಗಿತಗೊಳಿಸುತ್ತಲೇ ಬರುತ್ತಿವೆ… ಅದ್ಯಾಕೋ  ವಿಮಾನ ಸೇವೆ ಮಾತ್ರ ಮೈಸೂರಿಗೆ ಹೊಂದಿಬರದಿರುವುದು ಮಾತ್ರ ಅಚ್ಚರಿ ಮೂಡಿಸಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು