ಮೈಸೂರು: ರೈಲಿನಲ್ಲಿ ಎಸಿ ಬೋಗಿ ಟಿಕೆಟ್ ಮಾಡಿದ್ದ ಗ್ರಾಹಕರೊಬ್ಬರಿಗೆ ಎಸಿ ಬೋಗಿ ನೀಡದಿರುವುದಕ್ಕೆ ಮೈಸೂರು ರೈಲ್ವೆ ವಿಭಾಗಕ್ಕೆ ಗ್ರಾಹಕರ ವೇದಿಕೆ 5 ಸಾವಿರ ದಂಡ ವಿಧಿಸಿದೆ.
ಮೈಸೂರಿನ ಮಥುರಾ ನಗರದ ನಿವಾಸಿ ಸಾಮಾಜಿಕ ಹೋರಾಟಗಾರ ಡಾ. ಶೇಖರ್ ಮಾರ್ಚ್ ನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು ಟಿಪ್ಪು ರೈಲಿನಲ್ಲಿ ಎಸಿ ಇರುವ ಬೋಗಿ ಟಿಕೆಟ್ ಪಡೆದುಕೊಂಡಿದ್ದರು. ಪ್ರಯಾಣಕ್ಕೆ ಆಗಮಿಸಿದಾಗ ಬೋಗಿಯಲ್ಲಿ ಎಸಿ ಇರಲಿಲ್ಲ. ಎಸಿ ಇಲ್ಲದಿರುವ ಬಗ್ಗೆ ಮೆಕ್ಯಾನಿಕ್ ಗೆ ತಿಳಿಸಿದಾಗ ಎಸಿ ಘಟಕವೇ ಸರಿಯಿಲ್ಲವೆಂದು ಉತ್ತರಿಸಿದ್ದಾನೆ. ಬಳಿಕ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿ ಅವರು ತಮ್ಮ ಹಣವನ್ನು ಮರುಪಾವತಿ ಮೂಲಕ ಪಡೆದುಕೊಳ್ಳುವಂತೆ ಹೇಳಿದ್ದಾರೆ. ಅದರಂತೆ ರೈಲ್ವೆ ನಿಲ್ದಾಣಕ್ಕೆ ಬಂದು ವಿಚಾರಿಸಿದರೆ ಅಲ್ಲಿ ಮೈಸೂರು ರೈಲ್ವೆ ಅಧಿಕಾರಿಗಳಿಂದ ಸೂಕ್ತ ರೀತಿಯ ಸ್ಪಂದನೆ ದೊರೆತಿಲ್ಲ.
ಇದರಿಂದ ಬೇಸರಗೊಂಡ ಶೇಖರ್ ಅವರು ಗ್ರಾಹಕರ ವೇದಿಕೆಗೆ ಮೊರೆ ಹೋಗಿ ಎಸಿ ಬೋಗಿಯಲ್ಲಿ ಎಸಿ ಅಳವಡಿಸದೆ ತೊಂದರೆ ಮಾಡಿದ್ದು ಅಲ್ಲದೆ ಮನಸ್ಸಿಗೆ ಘಾಸಿ ಮಾಡಿದ್ದಕ್ಕೆ 50 ಸಾವಿರ ಪರಿಹಾರ ಕೊಡಿಸುವಂತೆ ಕೇಳಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಮೈಸೂರು ಡಿಆರ್ ಎಂ ಅವರಿಗೆ ಪ್ರಯಾಣದಿಂದ ಆದ ತೊಂದರೆಗೆ 3 ಸಾವಿರ ಹಾಗೂ ವೇದಿಕೆಯ ವಿಚಾರಣ ಭತ್ಯೆ 2 ಸಾವಿರ ನೀಡುವಂತೆ ಆದೇಶಿಸಿದ್ದಾರೆ.
60 ದಿನದಲ್ಲಿ ದಂಡ ಪಾವತಿಸದಿದ್ದರೆ ಪ್ರತಿದಿನಕ್ಕೆ 100 ರೂ ದಂಡದಂತೆ ಪರಿಹಾರ ತುಂಬಿಕೊಡಬೇಕೆಂದು ವೇದಿಕೆಯ ಅಧ್ಯಕ್ಷರು ಆದೇಶಿಸಿದ್ದು, ಒಂದು ವೇಳೆ ಪರಿಹಾರ ನೀಡದಿದ್ದಲಿ ಜೈಲು ಶಿಕ್ಷೆ ಅನುಭವಿಸ ಬೇಕಾಗುತ್ತದೆ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.