ಮೈಸೂರು: ತಮಿಳುನಾಡಿನ ಜಲಪ್ರಳಯದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಓರ್ವ ಇಂಜಿನಿಯರ್ ನಾಪತ್ತೆಯಾಗಿದ್ದಾರೆ.
ಮೈಸೂರಿನ ರಾಮಾನುಜ ರಸ್ತೆಯ ಇಂಜಿನಿಯರ್ ಜೇವೇಂದ್ರಕುಮಾರ್ ಎಂಬುವವರೇ ಚೆನೈ ಮಹಾಮಳೆಯಲ್ಲಿ ನಾಪತ್ತೆಯಾದವರಾಗಿದ್ದು, ಚೆನೈ ಮನೆಯಲ್ಲಿದ್ದಾಗ ಮಹಾ ಮಳೆಗೆ ಮೊದಲ ಅಂತಸ್ತಿನಲ್ಲಿ ಮಳೆ ನೀರು ಉಕ್ಕಿದ್ದು, ಎರಡನೇ ಅಂತಸ್ತಿನಲ್ಲೇ ನಿಂತು ಮೈಸೂರಿನ ಕುಟುಂಬದವರಿಗೆ ಕರೆ ಮಾಡಿ ಪರಿಸ್ಥಿಯನ್ನು ವಿವರಿಸಿ ಅಳುತ್ತಿದ್ದರು. ಇದಾದ ಬಳಿಕ ಸಂಪರ್ಕ ಕಡಿತಗೊಂಡಿದ್ದು ಮೈಸೂರಿನಲ್ಲಿ ಪೋಷಕರು ಆತಂಕಗೊಂಡಿದ್ದಾರೆ. ಇನ್ನೂ ಮೈಸೂರಿನ ಹೆಬ್ಬಾಳ್ ನ ಒಂದೇ ಕುಟುಂಬದ ಮೂವರು ಲೋಹಿತ್ ಕುಮಾರ್, ಮಮತಾ ಮತ್ತು ಏಕನಾಥ್ ಎಂಬುವವರೇ ನಾಪತ್ತೆಯಾಗಿದ್ದಾರೆ. ಚೆನೈ ನಗರದ ಕಾರ್ಪಕ್ಕಂ ಪ್ರದೇಶದಲ್ಲಿ ಸಿಲುಕಿರುವ ಇವರು ಮೊದಲ ದಿನ ಸಂಪರ್ಕದಲ್ಲಿದ್ದರು. ಆದರೆ ಈಗ ಸಂಪರ್ಕ ಕಡಿತಗೊಂಡಿರುವುದು ಮೈಸೂರಿನ ಕುಟುಂಬಸ್ಥರ ಆತಂಕ ಉಂಟು ಮಾಡಿದೆ.
ಚೆನೈನಲ್ಲಿ ನಾಪತ್ತೆಯಾಗಿದ್ದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆಯ ಸುಧೀಂದ್ರಗೌಡ ಹಾಗೂ ಮೈಸೂರಿನ ರಾಮಾನುಜ ರಸ್ತೆಯ ಅಕ್ಷಯ್ ಕುಮಾರ್ ಎಂಬುವವರು ಪತ್ತೆಯಾಗಿದ್ದಾರೆ. ರಕ್ಷಣಾ ಪಡೆಯ ಸಹಾಯದೊಂದಿಗೆ ಇಂದು ತವರು ಮೈಸೂರಿಗೆ ಬಂದಿಳಿದಿದ್ದಾರೆ.