ಮೈಸೂರು: ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಅನ್ಯಧರ್ಮೀಯ ಜೋಡಿಗಳ ಮೇಲೆ ದಾಳಿ ನಡೆಸಿ, ಪತಿಗೆ ತಲ್ವಾರ್ ನಿಂದ ಹೊಡೆದು ಪತ್ನಿಯನ್ನು ಕಿಡ್ಯಾಪ್ ಮಾಡಿರುವ ಘಟನೆ ಮೈಸೂರಿನ ಅಶೋಕಪುರಂನಲ್ಲಿ ನಡೆದಿದೆ.
ಮೈಸೂರಿನ ಆಶೋಕಪುರಂನಲ್ಲಿ ಬಾಡಿಗೆಗೆ ಮನೆ ಪಡೆದಿದ್ದ ಜೋಡಿ ಇಲ್ಲಿಯೇ ವಾಸಿಸುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಮನೆ ಸಮೀಪದ ವೃತ್ತದಲ್ಲಿ ಬೈಕ್ ನಲ್ಲಿ ಬರುತ್ತಿದ್ದಾಗ ಎದುರು ಬಂದ ಶಿಫ್ಟ್ ಕಾರ್ ನಲ್ಲಿ ಬಂದ ನಾಲ್ವರು ಶಿವರಾಜ್ ಗೆ ತಲ್ವಾರ್ ನಿಂದ ಹಲ್ಲೆ ನಡೆಸಿ, ಹಲೀಮ್ ಶಾಹೀನ್ ನನ್ನು ಬಲವಂತದಿಂದ ಎಳೆದೊಯ್ದಿದ್ದಾರೆ. ಹಲ್ಲೆಗೆ ಒಳಗಾದ ಶಿವರಾಜ್ ನನ್ನು ಸ್ಥಳೀಯರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳೂರಿನ ಶಿವರಾಜ್ ಮತ್ತು ಹಲೀಮ್ ಶಾಹೀನ್ ನಡುವೆ ಪ್ರೇಮಾಂಕುರವಾಗಿ ಆರು ತಿಂಗಳ ಹಿಂದೆ ಕುಟುಂಬದ ವಿರೋಧದ ನಡುವೆ ಮೈಸೂರಿನ ಒಂಟಿಕೊಪ್ಪಲಿನ ದೇವಸ್ಥಾನದಲ್ಲಿ ಗಂಡಿನ ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆದರೆ ಇವರ ವಿವಾಹವನ್ನು ಪ್ರಶ್ನಿಸಿದ ಹಲೀಮ್ ಶಾಹಿಮ್ ಅವರ ತಂದೆ ಹಮೀದ್ ನನ್ನ ಮಗಳು ಇನ್ನೂ ಅಪ್ರಾಪ್ರೆಯಾಗಿದ್ದು ಅವಳ ವಿವಾಹವನ್ನು ಅಂಗೀಕರಿಸದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಪ್ರೇಮಿಗಳ ಪರ ತೀರ್ಪು ನೀಡಿ ಆಕೆ ಯುವತಿಯಾಗಿದ್ದು ಅವರ ವಿವಾಹವನ್ನು ಅಂಗೀಕರಿಸಿತ್ತು.
ವಿವಾಹಿತ ಪ್ರೇಮಿಗಳಿಬ್ಬರು ಮಂಗಳೂರು ಮೂಲದವರಾಗಿರುವುದರಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ಮೈಸೂರು ಪೊಲೀಸರ ತಂಡ ಮಂಗಳೂರಿನತ್ತ ಪ್ರಯಾಣ ಬೆಳೆಸಿ ತನಿಖೆ ಚುರುಕುಗೊಳಿಸಿದೆ.