ಮೈಸೂರು: ಸಾಮಾಜಿಕ ಜಾಲತಾಣಗಳ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಕೇರಳ ಮೂಲದ ಪಿಂಪ್ ಬಂಧಿಸಿ, ಆರು ಮಂದಿ ಯುವತಿಯರನ್ನು ರಕ್ಷಿಸಲಾಗಿದೆ.
ಕೇರಳ ಮೂಲದ ಪಿಂಪ್ ಸುನೀಲ್ ಬಂಧಿತ ಆರೋಪಿ. ಈತ ನಿವೃತ್ತ ಅಡಿಷನಲ್ ಎಸ್ಪಿ ಮಾಲೀಕತ್ವದ ರೆಸಾರ್ಟ್ ನ್ನು ಬಾಡಿಗೆ ಪಡೆದು ಹೊರರಾಜ್ಯಗಳ ಯುವತಿಯರನ್ನು ಫೇಸ್ ಬುಕ್, ವಾಟ್ಸಪ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕಿಸಿ ಯುವತಿಯರನ್ನು ಕರೆತರುತ್ತಿದ್ದನು. ಸೋಮವಾರ ರಾತ್ರಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಮೈಸೂರಿನ ನರಸಿಂಹರಾಜ ಠಾಣೆಯ ಪೊಲೀಸರು ಮೈಸೂರಿನ ರಿಂಗ್ ರಸ್ತೆಯ ಹಳೆ ಕೆಸರೆಯಲ್ಲಿರುವ ಅತಿಥಿ ಆರಾಧನ ರೆಸಾರ್ಟ್ ನಲ್ಲಿ ಹೊರ ರಾಜ್ಯದ ಯುವತಿಯರನ್ನು ಬಾಡಿಗೆ ಆಧಾರದ ಮೇಲೆ ಕರೆತಂದು ದಂಧೆ ನಡೆಸುತ್ತಿದ್ದ ಕೇರಳ ಮೂಲದ ಸುನೀಲ್ ನನ್ನು ಬಂಧಿಸಿದ್ದು, ಜತೆಗೆ ಆರು ಮಂದಿ ಗಿರಾಕಿಗಳನ್ನು ಬಂಧಿಸಿದ್ದಾರೆ. ಈ ರೆಸಾರ್ಟ್ ನಲ್ಲಿ ಬಾಂಬೆ, ಕಲ್ಕತ್ತಾ, ಗೋವಾ ಮುಂತಾದ ಕಡೆಗಳಿಂದ ಬಾಡಿಗೆ ರೂಪದಲ್ಲಿ ಯುವತಿಯರನ್ನು ಕರೆತಂದು ಅವರನ್ನು ರೆಸಾರ್ಟ್ ನ ಹಿಂಭಾಗದ ಗೋಡನ್ ನಲ್ಲಿ ಇರಿಸಲಾಗಿತ್ತು. ದಾಳಿ ನಡೆಸಿದ ಪೊಲೀಸರು ಗೋಡನ್ನಲ್ಲಿದ್ದ ಆರು ಮಂದಿ ಕಲ್ಕತ್ತಾ ಮೂಲದ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.