ಮೈಸೂರು: ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಆಸ್ಪತೆಗಳಲ್ಲಿ ಇಲಿ, ಹೆಗ್ಗಣಗಳ ಕಾಟ ಜೋರಾಗಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ.
ಮೈಸೂರಿನ ದೊಡ್ಡಾಸ್ಪತ್ರೆಯಲ್ಲಿ ಇಲಿ, ಹೆಗ್ಗಣಗಳ ನಿಯಂತ್ರಣವೇ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಹತೋಟಿಗೆ ಬಾರದಷ್ಟು ಇಲಿ ಹೆಗ್ಗಣಗಳು ಆಸ್ಪತ್ರೆ ಸೇರಿಕೊಂಡಿವೆ. ರಾತ್ರಿ ವೇಳೆ ರೋಗಿಯೊಟ್ಟಿಗೆ ಸಂಬಂಧಿಕರು ನೆಲದ ಮೇಲೆ ಮಲಗಿದರೇ ಮೈಮೇಲೆ ಇಲಿ, ಹೆಗಣ್ಣಗಳು ಹರಿದಾಡಿ ನಿದ್ದೆಭಂಗದೊಂದಿಗೆ ಭಯವನ್ನು ಹುಟ್ಟಿಸುತ್ತವೇ, ಇನ್ನೂ ರೋಗಿಗೆ ತಂದಿಟ್ಟ ಆಹಾರವನ್ನು ಬಚ್ಚಿಡದಿದ್ದರೇ ರಾತ್ರಿ ಅವುಗಳನ್ನು ತಿಂದು ಬಿಸಾಡಿರುತ್ತವೆ. ಕೊನೆಗೆ ಆಹಾರ ಏನೂ ಸಿಗದಿದ್ದರೇ ಒಮ್ಮೆಮ್ಮೆ ರೋಗಿಯ ಬ್ಯಾಡೇಜ್ ಗೆ ಬಾಯಿ ಹಾಕಿ ಕೀಳುವ ಘಟನೆಗಳು ನಡೆದಿವೆ. ಕೆಲವು ರೋಗಿಯ ಸಂಬಂಧಿಕರು ರಾತ್ರೋರಾತ್ರಿ ಇಲಿ, ಹೆಗ್ಗಣಗಳ ಕಾಟಕ್ಕೆ ಹೆದರಿ ತಡರಾತ್ರಿಯೇ ರೋಗಿಗಳನ್ನು ಕರೆದುಕೊಂಡು ಆಸ್ಪತ್ರೆಯಿಂದಲೇ ಕಾಲ್ಕಿಳುವ ಘಟನೆ ಸಹ ನಡೆದಿದೆ.
ಇಲ್ಲಿನ ಆಸ್ಪತ್ರೆಯಲ್ಲಿ ಇಲಿ, ಹೆಗ್ಗಣಗಳು ಜಾಸ್ತಿಯಾಗಲು ಪಕ್ಕದಲ್ಲೇ ಇರುವ ದೊಡ್ಡ ದೇವರಾಜ ಮಾರುಕಟ್ಟೆಯೇ ಕಾರಣ. ಕೊಳೆತ ತರಕಾರಿಯಿಂದಾಗಿ ಅಲ್ಲಿನ ಹೆಗ್ಗಣ, ಇಲಿಗಳು ಬಿಲಗಳನ್ನು ಮಾಡಿಕೊಂಡು ಆಸ್ಪತ್ರೆಗೆ ಬರುತ್ತಿವೆ. ಇಲಿ ಹೆಗ್ಗಣಗಳನ್ನು ಹಿಡಿಯುವುದನ್ನು ಖಾಸಗಿ ಕಂಪನಿಗೆ ವಹಿಸಲಾಗಿದೆ. ಅವರಿಂದಲೂ ಇಲಿ, ಹೆಗ್ಗಣಗಳನ್ನು ನಿಯಂತ್ರಿಸಲು ವಿಫಲವಾಗಿರುವ ಇಲಿ, ಹೆಗ್ಗಣಗಳ ಕಾಟವನ್ನು ನಿಯಂತ್ರಿಸಲು ಅಗತ್ಯ ಕ್ರಮವನ್ನು ಹುಡುಕಲಾಗುತ್ತಿದೆ. ಅಲ್ಲದೆ ಸಾರ್ವಜನಿಕರಿಗೂ ತಾವು ತಂದ ಆಹಾರ ಪದಾರ್ಥಗಳನ್ನು ಎಲ್ಲೆಂದರಲ್ಲಿ ಬೀಸಾಡುವುದನ್ನು ತಡೆಗಟ್ಟಲು ಅರಿವು ಮೂಡಿಸುವುದಾಗಿ ಹಾಗೂ ಅವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕಿ ಡಾ.ಎಸ್. ರಾಧಾಮಣಿ ತಿಳಿಸಿದ್ದಾರೆ.