ಮೈಸೂರು: ಪ್ರತಿಪಕ್ಷಗಳನ್ನು ಟೀಕಿಸುತ್ತಲೇ ಕಾಲಾಹರಣ ಮಾಡುತ್ತಾ, ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸಿಎಂ ಸಿದ್ಧರಾಮಯ್ಯನವರ ಸಾಧನೆ ಶೂನ್ಯವೆಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಳೆದ 30 ತಿಂಗಳ ಸಿಎಂ ಸಿದ್ಧರಾಮಯ್ಯನವರ ಆಡಳಿತ ಕುಸಿದಿದ್ದು, ಯಾವುದೇ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳೇ ನಡೆದಿಲ್ಲ. ಇನ್ನೂ ಸಿದ್ಧು ಸರ್ಕಾರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಡಿಜಿ ಹಾಗೂ ಐಜಿಪಿಗಳೇ ಫೋನ್ ಬಿಲ್ ಕಟ್ಟಲಾಗದೇ ಇರುವಷ್ಟರ ಮಟ್ಟಿಗೆ ದಿವಾಳಿಯಾಗಿದೆ. ಸಿದ್ದು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ಇವರೇ ದೊಡ್ಡ ಹೈಕಮಾಂಡ್ ಆಗಿದ್ದಾರೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ಕೇಳಿದ ಪ್ರಶ್ನೆಗೆ ರಾಜ್ಯಾಧ್ಯಕ್ಷ ಸ್ಥಾನದ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧರಿದ್ದೇವೆ. ನಾನು ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 150 ಕ್ಕೂ ಹೆಚ್ಚು ಸ್ಥಾನ ಗೆಲುವು ಸಾಧಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು.