ಮೈಸೂರು: ಕುಡಿದು ಕಾರು ಓಡಿಸುತ್ತಿದ್ದ ವಿದ್ಯಾರ್ಥಿಗಳ ಕಾರು ತಡರಾತ್ರಿ ಅಪಘಾತಕ್ಕೀಡಾಗಿದ್ದು, ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಮೈಸೂರಿನ ಹುಣಸೂರು ರಸ್ತೆಯ ಅಪಾರ್ಟ್ ಮೆಂಟ್ ಬಳಿ ನಡೆದಿದೆ.
ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಉದ್ಯೋಗಿಯಾಗಿರುವ ಎಚ್.ಎಂ ಸುಬ್ಬಮ್ಮಯ್ಯ ಅವರ ಏಕೈಕ ಪುತ್ರ ರೋಷನ್(18) ಅಪಘಾತದಲ್ಲಿ ಮೃತಪಟ್ಟ ಯುವಕನಾಗಿದ್ದು, ಕಾರು ಚಾಲಕ ದೇವಯ್ಯ, ಭುವಿತ್, ಪ್ರೀತಂ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಯುಸಿ ವಿದ್ಯಾರ್ಥಿಗಳಾದ ರೋಷನ್ ಮತ್ತು ಆತನ 8 ಮಂದಿ ಸ್ನೇಹಿತರು ರಾತ್ರಿ ಒಂದು ಮಾರುತಿ ಬಲೋನಾ ಕಾರು ಹಾಗೂ ಎರಡು ದ್ವಿಚಕ್ರವಾಹನದಲ್ಲಿ ಪಾರ್ಟಿ ಮಾಡಲು ತೆರಳಿದ್ದರು. ಈ ವೇಳೆ ರಾತ್ರಿ 2 ರ ಸಮಯದವರೆಗೂ ಕಂಠಪೂರ್ತಿ ಕುಡಿದು, ಮತ್ತಿನಲ್ಲೇ ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದಾಗ ಹುಣಸೂರು ರಸ್ತೆಯ ಅಪಾರ್ಟ್ ಮೆಂಟ್ ಬಳಿ ಕಾರಿನ ವೇಗದ ನಿಯಂತ್ರಣ ತಪ್ಪಿದ್ದು, ಕಾರು ರಸ್ತೆ ವಿಭಜಕಕ್ಕೆ ಹೊಡೆದು, ರಸ್ತೆ ವಿಭಜಕದಲ್ಲಿ ಇದ್ದ ಕಬ್ಬಿಣದ ಗ್ರಿಲ್ ಗೆ ಕಾರಿನ ಹಿಂಬಂದಿ ಎಡಗಡೆ ಸೀಟು ಅಪ್ಪಳಿಸಿದೆ. ಹಿಂದೆ ಕುಳಿತಿದ್ದ ರೋಷನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಪಕ್ಕ ಕುಳಿತಿದ್ದ ಪೀತಂಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಕಾರಿನ ಚಾಲಕ ಹಾಗೂ ಮುಂದೆ ಕುಳಿತಿದ್ದ ಇಬ್ಬರಿಗೂ ಯಾವುದೇ ಗಾಯಗಳಾಗದೇ ಪಾರಾಗಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ವಿವಿ ಪುರಂ ಸಂಚಾರಿ ಠಾಣೆಯ ಪೊಲೀಸರು ಕಾರಿನ ಚಾಲಕ ವಿಧಾನದ ದೇವಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.