ಮೈಸೂರು: ಅಪ್ಪ ಮಾಡಿದ ಸಾಲಕ್ಕೆ ಹೆದರಿ ಆತನ ಮಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಣಸೂರು ತಾಲೂಕಿನ ಮಾದೂರಿನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಮಲ್ಲೇಶ್(20) ಎಂಬಾತನೇ ಅಪ್ಪನ ಸಾಲಕ್ಕಂಜಿ ವಿಷ ಸೇವಿಸಿದ ಸಾವನ್ನಪ್ಪಿದ ಯುವಕನಾಗಿದ್ದು, ತಂದೆ ಸ್ವಾಮಿಗೌಡ 1 ಎಕರೆ ಭೂಮಿಯನ್ನು ಹೊಂದಿದ್ದು, ಬೆಳೆದಿದ್ದ ಹೊಗೆಸೊಪ್ಪು ಮಳೆಯಿಲ್ಲದೆ ಹಾನಿಗೆ ಒಳಗಾಗಿತ್ತು. ಅಲ್ಲದೆ ಅಕ್ಕನ ಮದುವೆ ಮಾಡಿದ್ದ ಸಾಲ ಸೇರಿ ಒಟ್ಟು 80 ಸಾವಿರ ಬ್ಯಾಂಕ್ ಸಾಲ ಹಾಗೂ 3 ಲಕ್ಷ ಕೈ ಸಾಲವನ್ನು ಮಾಡಿಕೊಂಡಿದ್ದರು.
ಆತನ ತಂದೆಗೆ ಅಪಘಾತವಾಗಿ ಕಣ್ಣೊಂದು ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಈ ವೇಳೆ ಜೀವನ ನಡೆಸುವುದೇ ಕಷ್ಟವಾಗಿತ್ತು. ಈ ಸಮಯದಲ್ಲಿ ಸಾಲಗಾರರು ಸಾಲದ ಹಣ ನೀಡುವಂತೆ ಅಪ್ಪ-ಮಗನಿಗೆ ದಂಬಾಗಲು ಹಾಕಿದ್ದರು. ಈ ವಿಚಾರವಾಗಿ ಅಪ್ಪ ಸ್ವಾಮಿಗೌಡ ಮಗ ಮಲ್ಲೇಶ್ ನಡುವೆ ಜಗಳ ನಡೆದಿತ್ತು. ಇದರಿಂದ ಬೇಸರಗೊಂಡ ಮಲ್ಲೇಶ್ ಅಕ್ಕನ ಮನೆಗೆ ಹೋಗುವುದಾಗಿ ಹೇಳಿ ಕೆ.ಆರ್ ನಗರ ತಾಲೂಕಿನ ಕೆಸ್ತೂರು ಗ್ರಾಮಕ್ಕೆ ಹೋಗಿದ್ದು, ಅಲ್ಲಿಂದ ಬರುವ ವೇಳೆ ಕಟ್ಟಿಮಂಡಿಯ ರಸ್ತೆಯಲ್ಲಿ ವಿಷ ಸೇವಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮಲ್ಲೇಶ್ ಸಾವನ್ನಪ್ಪಿದ್ದಾನೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.