ಮೈಸೂರು: ನಂಜನಗೂಡಿನ ಚಾಮಲಾಪುರದಹುಂಡಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನ (ಮಾರಮ್ಮನ ದೇವಸ್ಥಾನ) ನಿರ್ಮಾಣದಲ್ಲಿ 1 ಲಕ್ಷದ 66 ಸಾವಿರ ರೂ. ಗಳನ್ನು ಗುಳುಂ ಮಾಡಿರುವ ವಿಚಾರ ಗ್ರಾಮದಲ್ಲಿ ಬಿಗುವಿನ ವಾತಾವರಣವನ್ನು ಸೃಷ್ಟಿಸಿದೆ.
ಹಣ ದುರುಪಯೋಗವಾಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸಂಬಂಧಪಟ್ಟವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿತ್ತು.
ಚಾಮಲಾಪುರದಹುಂಡಿಯ ಹೃದಯ ಭಾಗದಲ್ಲಿರುವ ಮಾರಮ್ಮನ ಗುಡಿ ತೀವ್ರ ಶಿಥಿಲವಾಗಿತ್ತು, ಗ್ರಾಮದ ಮುಖಂಡರುಗಳು ಪಂಚಾಯಿತಿ ಸೇರಿ ಇದನ್ನು ಅಭಿವೃದ್ದಿ ಪಡಿಸಲು ತೀರ್ಮಾನಿಸಿದ್ದರು. ಈ ಗ್ರಾಮದ ವ್ಯಾಪ್ತಿಗೆ ಬರುವ ಎಟಿಎಸ್ ಕಾರ್ಖಾನೆಯ ಮಾಲೀಕರು ಮುಂದೆ ಬಂದು ಇದರ ಅಭಿವೃದ್ದಿಗೆ ಹಣ ನೀಡುವುದಾಗಿ ಮುಖಂಡರಿಗೆ ತಿಳಿಸಿದರು, ಅದರಂತೆ ಅವರು 3 ಲಕ್ಷದ 56 ಸಾವಿರದ ಹಣ ಕಾರ್ಖಾನೆಯಿಂದ ನೀಡಿದ್ದಾರೆ.
ಈ ಹಣದಲ್ಲಿ ಸಮುದಾಯ ಭವನ ಅಭಿವೃದ್ದಿಗೆ (ಮಾರಮ್ಮನ ದೇವಸ್ಥಾನ) 1 ಲಕ್ಷದ 90 ಸಾವಿರ ಖರ್ಚು ಮಾಡಿ ಅದನ್ನು ಉದ್ಘಾಟನೆ ಮಾಡಲಾಗಿದೆ. ಈ ಬಗ್ಗೆ ಗ್ರಾಮದವರು ಕಾರ್ಖಾನೆಗೆ ತೆರಳಿ ಕುಡಿಯುವ ನೀರಿನ ಸಂಬಂಧಿಸಿದ ವಿಚಾರವಾಗಿ ಕಾರ್ಖಾನೆಯ ಮಾಲೀಕರನ್ನು ಮತ್ತೆ ಸಹಾಯ ಮಾಡಲು ಕೇಳಿದಾಗ ಅವರು ಈಗಾಗಲೇ ನೀಡಿರುವ 3 ಲಕ್ಷದ 50 ಸಾವಿರ ಹಣದ ಬಗ್ಗೆ ತಿಳಿಸಿದರು ಎನ್ನಲಾಗಿದೆ. ಇದರಿಂದ 1.66 ಲಕ್ಷ ರೂ. ಹಣ ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ.
ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಹಣ ಗುಳುಂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಗರಸಭಾ ಸದಸ್ಯ ಶಂಕರ್ ಅವರನ್ನು ಪಂಚಾಯಿತಿಗೆ ಕರೆಯಿಸಿ ವಿಚಾರಣೆಗೆ ಮಾಡಿದಾಗ ಅವರು ಬಾಕಿ ಹಣ 1.66 ಲಕ್ಷ ರೂ.ಗಳನ್ನು ನೀಡುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಮುಖಂಡರು ಮತ್ತು ಯುವಕರು 2 ವರ್ಷದಿಂದ ಹಣ ದುರುಪಯೋಗ ಮಾಡಿಕೊಂಡಿರುವುದಲ್ಲದೆ ದೇವಸ್ಥಾನದ ನೆಪದಲ್ಲಿ ನಮ್ಮ ಊರಿಗೆ ಕೆಟ್ಟ ಹೆಸರು ತಂದಿದ್ದು, ಇದು ಊರಿಗೆ ಮಾಡಿದ ದ್ರೋಹವಾಗಿದೆ ಬಹಿರಂಗವಾಗಿ ಪಂಚಾಯಿತಿಯವರ ಮುಂದೆ ದಂಡ ಕಟ್ಟುವುದರ ಜೊತೆಗೆ ಸಾರ್ವತ್ರಿಕ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಾಗ ಶಂಕರ್ ಪಂಚಾಯಿತಿಯಿಂದ ಅರ್ಧಕ್ಕೆ ಹೊರ ನಡೆದಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಂಬಂಧವಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಹಣ ದುರುಪಯೋಗ ಮಾಡಿದ ಹಿನ್ನಲೆಯಲ್ಲಿ ಶಂಕರ್ ತಕ್ಷಣ ರಾಜೀನಾಮೆ ನೀಡಬೇಕು. ತಪ್ಪಿದರೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ.