ಮೈಸೂರು: ನಂಜನಗೂಡು ತಾಲೂಕಿನ ಯಾಡಿಯಾಲ ಅರಣ್ಯದಂಚಿನ ಬಳಿ ನರಭಕ್ಷಕ ಹುಲಿ ಸೆರೆಯಾದ ಬಳಿಕ ಈಗ ಆನೆಗಳ ಹಾವಳಿ ಹೆಚ್ಚಾಗಿದ್ದು ಅರಣ್ಯದಂಚಿನ ಪ್ರದೇಶದ ರೈತರ ಬೆಳೆಗಳಿಗೆ ದಾಳಿ ಇಡುತ್ತಿರುವ ಆನೆ ಹಿಂಡುಗಳಿಂದ ಸ್ಥಳೀಯರಿಗೆ ಆತಂಕ ಉಂಟು ಮಾಡಿವೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಯಾಡಿಯಾಲ ಗ್ರಾಮ ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಅರಣ್ಯದಂಚಿನ ಜನರ ನಿದ್ದೆಗೆಟ್ಟಿದೆ. ಕೆಲವು ದಿನಗಳ ಹಿಂದೆಯಷ್ಟೇ ನರಭಕ್ಷಕ ಹುಲಿ ದಾಳಿಯಿಂದ ಆತಂಕಗೊಂಡಿದ್ದ ಜನತೆ ಕೊನೆಗೆ ಅರಣ್ಯ ಇಲಾಖೆ ಅದನ್ನು ಸೆರೆಹಿಡಿಯುವ ಮೂಲಕ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ ಕಳೆದ ಎರಡು ದಿನಗಳಿಂದ ಮತ್ತೆ ಬೇಗೂರು ಅರಣ್ಯ ಪ್ರದೇಶದಿಂದ ಕಾಡಂಚಿನ ಗ್ರಾಮಳತ್ತ ನುಗ್ಗಿರುವ ಕಾಡಾನೆಗಳಿಂದ ಜನರು ಮತ್ತಷ್ಟು ಆತಂಕ ಗೊಂಡಿದ್ದಾರೆ. ಕಾಡನೆಗಳ ಹಿಂಡು ಈಗಾಗಲೇ ಹಲವು ರೈತರ ಜಮೀನುಗಳಿಗೆ ನುಗ್ಗಿ ಫಸಲನ್ನು ನಾಶ ಪಡಿಸಿದ್ದು, ಗ್ರಾಮಗಳತ್ತಲೂ ನುಗ್ಗಲು ಯತ್ನಿಸಿವೆ. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಧಾವಿಸಿರುವ ಅರಣ್ಯ ಇಲಾಖೆ ಕಾಡನೆಗಳನ್ನು ನಾಡಿಗಟ್ಟಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ಜತೆ ಕೂಡಿರುವ ಗ್ರಾಮಸ್ಥರು ಆನೆಗಳತ್ತ ಕಲ್ಲು ತೂರಿ ಆನೆಗಳನ್ನು ಓಡಿಸಲು ಮುಂದಾಗಿದ್ದಾರೆ.