ಮೈಸೂರು: ಗ್ರಾಮೀಣ ಪ್ರದೇಶದಲ್ಲಿ ಬಟ್ಟೆತೊಳೆಯಲು ಕೆರೆ, ಕಾಲುವೆ, ನದಿಗಳಿಗೆ ಹೋಗುವುದು ಸಾಮಾನ್ಯ. ಆದ್ದರಿಂದ ಜನತೆಯ ಅನುಕೂಲಕ್ಕಾಗಿಯೇ ಸರ್ಕಾರ ಅಲ್ಲಲ್ಲಿ ಸೋಪಾನೆಕಟ್ಟೆಗಳನ್ನು ನಿರ್ಮಿಸಿದೆ. ಆದರೆ ಹೆಚ್.ಡಿ.ಕೋಟೆಯ ಸರಗೂರಲ್ಲಿ ಮಾತ್ರ ಕಳೆದ ಐದು ವರ್ಷಗಳ ಹಿಂದೆ ಆರಂಭಿಸಿದ ಕಾಮಗಾರಿ ಇನ್ನೂ ಮುಗಿಯದೆ ಜನ ಹಿಡಿಶಾಪ ಹಾಕುವಂತಾಗಿದೆ.
ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಹೊರಟು ಹೋಗುವ ಜನಪ್ರತಿನಿಧಿಗಳು, ತಾವು ಭೂಮಿಪೂಜೆ ನೆರವೇರಿಸಿದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆಯೇ? ಎಂಬುದನ್ನು ನೋಡುವ ತಾಳ್ಮೆಯೂ ಇರುವುದಿಲ್ಲ. ಇಂಥ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿಗಳು ನಡೆಯದೆ ಅಭಿವೃದ್ಧಿ ಕಾರ್ಯಗಳು ಹಳ್ಳಸೇರುತ್ತಿವೆ ಎನ್ನುವುದಕ್ಕೆ ಸರಗೂರಿನಲ್ಲಿ ಅರ್ಧಕ್ಕೆ ಸ್ಥಗಿತಗೊಂಡ ಸೋಪಾನಕಟ್ಟೆ ಕಾಮಗಾರಿ ಸಾಕ್ಷಿಯಾಗಿದೆ.
ಐದು ವರ್ಷಗಳ ಹಿಂದೆ ಸರಗೂರಿನ 9 ಹಾಗೂ 10ನೇ ವಾರ್ಡಿನ ಜನತೆಯ ಮನವಿ ಮೇರೆಗೆ ಬಟ್ಟೆ ತೊಳೆಯಲು, ನೀರು ತರಲು ಕಪಿಲಾ ನದಿಗೆ ಸೋಪಾನ ಕಟ್ಟೆ ನಿರ್ಮಾಣ ಮಾಡಲು ಸರಗೂರು ಪಟ್ಟಣ ಪಂಚಾಯಿತಿ ನಿರ್ಧಾರ ಕೈಗೊಂಡು ಮುಖ್ಯಮಂತ್ರಿ ವಿಶೇಷ ಅನುದಾನದಡಿ 25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲು ಕಾಮಗಾರಿಯ ಗುತ್ತಿಗೆಯನ್ನು ಗುತ್ತಿದೆದಾರ ಚಂದ್ರಶೇಖರ್ ಎಂಬುವರಿಗೆ ನೀಡಲಾಗಿತ್ತು.
ಸೋಪಾನಕಟ್ಟೆ ನಿರ್ಮಾಣ ಕಾಮಗಾರಿ ಆರಂಭಿಸಲಾಯಿತಾದರೂ, ಬಳಿಕ ಹಲವು ಕಾರಣಗಳಿಗಾಗಿ ಕಾಮಗಾರಿ ಸ್ಥಗಿತಗೊಂಡಿದೆ. 25 ಲಕ್ಷ ರೂ. ಅನುದಾನದಲ್ಲಿ 15 ಲಕ್ಷ ಖರ್ಚು ಮಾಡಿ ಒಂದಷ್ಟು ಕಾಮಗಾರಿ ಮಾಡಲಾಗಿದೆ. ಅದು ಅರ್ಧದಲ್ಲೇ ನಿಂತಿದ್ದರಿಂದ ಉಳಿದ 10 ಲಕ್ಷ ವಾಪಾಸ್ ಸರ್ಕಾರಕ್ಕೆ ಹೋಗಿದೆ.
ಈ ಬಗ್ಗೆ ಸ್ಥಳೀಯ ಪ್ರತಿನಿಧಿಗಳಾಗಲೀ, ಶಾಸಕರಾಗಲೀ ಯಾರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ ಪರಿಣಾಮ ಸರ್ಕಾರದ ಹಣ ಕಪಿಲೆ ಪಾಲಾಗಿದೆ. ಸ್ಥಳೀಯ ಪಂಚಾಯಿತಿ ಗುತ್ತಿಗೆದಾರನಿಗೆ ನೋಟೀಸ್ ನೀಡಿ ಕೈತೊಳೆದುಕೊಂಡಿದೆ. ಸೋಪಾನಕಟ್ಟೆಯತ್ತ ತೆರಳುವ ಮಂದಿ ಮಾತ್ರ ಹಿಡಿಶಾಪ ಹಾಕುತ್ತಲೇ ಇದ್ದಾರೆ.