ಮೈಸೂರು: ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಬಿಳಿಗಿರಿರಂಗನಾಥ ಸ್ವಾಮಿಯ ದೇವಾಲಯದಲ್ಲಿ ಸಂಕ್ರಾಂತಿಯ ಮಾರನೇ ದಿನವಾದ ಜ.16ರಂದು ಸಂಕ್ರಾಂತಿ ರಥೋತ್ಸವವು ವಿಜೃಂಣೆಯಿಂದ ನಡೆಯಲಿದ್ದು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಭಕ್ತರು ರಥೋತ್ಸವವನ್ನು ಕಣ್ತುಂಬಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿರುವ ಬಿಳಿಗಿರಿರಂಗನ ಬೆಟ್ಟವು ಪ್ರಾಚೀನವೂ, ಪುರಾಣ ಪ್ರಸಿದ್ಧವೂ ಆಗಿದ್ದು, ಚಂಪಾಕಾರಣ್ಯ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟಗಳಿಗೆ ಸಂಪರ್ಕ ಕಲ್ಪಿಸುವ ಈ ಪರ್ವತ ಶ್ರೇಣಿಯು 750 ಕಿ.ಮೀ. ಸುತ್ತಳತೆಯಿಂದ ಕೂಡಿದ್ದು, ಸಮುದ್ರ ಮಟ್ಟದಿಂದ 1816 ಮೀ. ಎತ್ತರದಲ್ಲಿದೆ.
ಇತಿಹಾಸ ತಜ್ಞರ ಪ್ರಕಾರ ಸುತ್ತಮುತ್ತಲಿನ ಮಹದೇಶ್ವರ, ಮಲ್ಲಿಕಾರ್ಜುನ, ನಂಜುಂಡೇಶ್ವರ, ಗೋಪಾಲಸ್ವಾಮಿ ದೇವರುಗಳಿಗಿಂತ ಬಿಳಿಗಿರಿರಂಗನಸ್ವಾಮಿಯು ವಿಭಿನ್ನ ವ್ಯಕ್ತಿತ್ವದಿಂದ ಕೂಡಿದವನು ಎಂದರೆ ತಪ್ಪಾಗಲಾರದು. ಮೊದಲ ಬಾರಿಗೆ ಅಂತರ್ಜಾತಿ ಹಾಗೂ ಬಹುಪತ್ನಿತ್ವಕ್ಕೆ ಮುನ್ನುಡಿ ಬರೆದ ಈತ ಮೂಲತಃ ಲಕ್ಷ್ಮೀದೇವಿ ಮತ್ತು ತುಳಸಮ್ಮ ಇವರಿಬ್ಬರನ್ನು ವರಿಸಿಕೊಂಡು ಸೋಲಿಗರ ಬೊಮ್ಮೇಗೌಡನ ಮಗಳಾದ ಚೆಂದುಳ್ಳಿ ಚೆಲುವೆ ಕುಸುಮಾಲೆಯನ್ನು ಮದುವೆಯಾಗುವುದರ ಮೂಲಕ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿರುವುದನ್ನು ಕಾಣಬಹುದು.
ರಥೋತ್ಸವಕ್ಕೂ ಮೊದಲು ಮೈಸೂರು ರಾಜರು ನೀಡಿರುವ ವಜ್ರಖಚಿತ ಚಿನ್ನಾಭರಣಗಳನ್ನು ಯಳಂದೂರು ಪಟ್ಟಣದ ಉಪಖಜಾನೆಯಿಂದ ಮೆರೆವಣಿಗೆಯ ಮೂಲಕ ಸೂಕ್ತ ಪೊಲೀಸ್ ರಕ್ಷಣೆಯಲ್ಲಿ ಬಿಳಿಗಿರಿರಂಗನ ಬೆಟ್ಟಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ದೇವರಿಗೆ ಧರಿಸಿ, ವಿಶೇಷ ಪುಷ್ಟಾಲಂಕಾರ, ಅರಿಶಿಣ,ಚಂದನ, ಕುಂಕುಮ,ನೈವೇದ್ಯಗಳನ್ನು ನೆರೆವೇರಿಸಲಾಗುತ್ತದೆ. ನಂತರ ರಥೋತ್ಸವಕ್ಕೆ ವಿಶೇಷ ವಸ್ತ್ರಾಲಂಕಾರ, ಕಬ್ಬು, ಎಳನೀರುನಿಂದ ಕೂಡಿದ ಹಸಿರು ತೋರಣಗಳಿಂದ ಶೃಂಗರಿಸಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ, ಲಕ್ಷ್ಮಿದೇವಿ, ತುಳಸಮ್ಮ ದೇವರುಗಳ ಉತ್ಸವ ಮೂರ್ತಿಗಳನ್ನು ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಭಕ್ತರ ಜೈಘೋಷ ಮೊಳಗುತ್ತಿದ್ದಂತೆಯೇ ವಾಡಿಕೆಯಂತೆ ಆಕಾಶದಲ್ಲಿ ಗರುಡವು ರಥೋತ್ಸವದ ಸುತಲೂ ಪ್ರದಕ್ಷಿಣೆ ಹಾಕುತ್ತದೆ. ಅದನ್ನು ಕಂಡ ಕೂಡಲೇ ಭಕ್ತರು ರಥೋತ್ಸವಕ್ಕೆ ಚಾಲನೆ ನೀಡಿ ರಥವನ್ನು ದೇವಸ್ಥಾನದ ಸುತ್ತ ಒಂದು ಬಾರಿ ಪ್ರದಕ್ಷಿಣೆ ಹಾಕಿ ಮೂಲ ಸ್ಥಾನಕ್ಕೆ ತಂದು ನಿಲ್ಲಿಸುತ್ತಾರೆ.
ಈ ಬಾರಿ ಜಿಲ್ಲಾಡಳಿತವು ಕಡ್ಡಾಯವಾಗಿ ಪ್ರಾಣಿ ಬಲಿ ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನೂ ಕೂಡ ನಿಷೇಧಿಸಿದೆ. ಬಿಳಿಗಿರಿರಂಗನಬೆಟ್ಟವು ಕೊಳ್ಳೇಗಾಲದಿಂದ ಮುಡಿಗುಂಡದ ಸೇತುವೆಯ ಹಾದಿಯಲ್ಲಿ ವಡಗೆರೆ ಮಾರ್ಗವಾಗಿ ಹಾದು ಹೋದರೆ 38 ಕಿ.ಮೀ., ಯಳಂದೂರು ಮಾರ್ಗವಾಗಿ 24 ಕಿ.ಮೀ, ಚಾಮರಾಜನಗರದಿಂದ ನಾಗವಳ್ಳಿ ಹೊಂಡರಬಾಳು ಮಾರ್ಗವಾಗಿ 48 ಕಿ.ಮೀ ದೂರದಲ್ಲಿದೆ.