ಮೈಸೂರು: ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಜೆಎಲ್ಬಿ ರಸ್ತೆಯ ತುಳಸಿ ಆಸ್ಪತ್ರೆಯ ಕಾಯಕಲ್ಪಕ್ಕೆ ಐ ಸರ್ವಿಸ್ ನೇಷನ್ ( I SERVE NATION ) ಎಂಬ ಸಂಸ್ಥೆ ಮುಂದಾಗಿದ್ದು, ಇದರಿಂದ ನಗರದ ಹೆರಿಗೆ ಆಸ್ಪತ್ರೆಗಳಲ್ಲಿಯೇ ಜನಪ್ರಿಯವಾದ ಹಾಗೂ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅನುಕೂಲಕಾರಿಯಾಗಿರುವ ಈ ಆಸ್ಪತ್ರೆಗೆ ಇನ್ನಷ್ಟು ಅಭಿವೃದ್ಧಿ ಕಂಡಂತಾಗಿದೆ.
ಈ ಆಸ್ಪತ್ರೆ ಸಂಪೂರ್ಣ ನಿರ್ಲಕ್ಷ್ಯತೆಗೆ ಒಳಗಾಗಿತ್ತು. ಸುತ್ತಮುತ್ತ ಕಾಡು ಬೆಳೆದು ಭಯದ ವಾತಾವರಣ ಸೃಷ್ಟಿಯಾಗಿತ್ತು ಇದನ್ನು ಕಂಡ ಸಂಸ್ಥೆ ಆಸ್ಪತ್ರೆಗೆ ಕಾಯಕಲ್ಪ ನೀಡಲು ಮುಂದಾಗಿದೆ.
ಆಸ್ಪತ್ರೆ ಆವರಣದಲ್ಲಿ ಜೆಸಿಬಿ ಯಂತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಐ ಸರ್ವಿಸ್ ನೇಷನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಮಂಜುನಾಥ್ ಕಾಯಕಲ್ಪಕ್ಕೆ ಚಾಲನೆ ನೀಡಿದ್ದಾರೆ. ಸುಮಾರು 10 ದಿನಗಳ ಕಾಲ ನಿರಂತರವಾಗಿ ಆಸ್ಪತ್ರೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು. ಈ ಕಾರ್ಯದಲ್ಲಿ ಆಸ್ಪತ್ರೆ ಸಿಬ್ಬಂದಿ, ಮುಡಾ ಇಂಜಿನಿಯರ್, ಆಸ್ಪತ್ರೆ ಆಡಳಿತಾಧಿಕಾರಿ, ಕೆಇಬಿ ಇಂಜಿನಿಯರ್, ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಪಾಲ್ಗೊಂಡಿದ್ದು 50 ಕ್ಕೂ ಹೆಚ್ಚು ಮಂದಿ 10 ದಿನಗಳ ಕಾಲ ಬೆಳಗ್ಗಿನಿಂದ ಸಂಜೆವರಗೆ ನಿರಂತರವಾಗಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗುವರು ಎಂದು ಡಾ.ಮಂಜುನಾಥ್ ತಿಳಿಸಿದ್ದಾರೆ.
ಇದರ ಜೊತೆಗೆ ಆಸ್ಪತ್ರೆ ಆವರಣದಲ್ಲಿ ಬೆಳೆದು ನಿಂತಿದ್ದ ಗಿಡ ಗಂಟೆಗಳು, ಕುರುಚಲು ಗಿಡಗಳನ್ನು ತೆಗೆದು, ಹುಳ ಹುಪ್ಪಟೆ, ಚೇಳು ಹಾವುಗಳಿಂದ ರೋಗಿಗಳನ್ನು ಹಾಗೂ ರೋಗಿಗಳನ್ನು ನೋಡಿಕೊಳ್ಳಲು ಬರುವವರನ್ನು ರಕ್ಷಿಸುವುದು. ಇದರ ಜೊತೆಗೆ ಪ್ರತಿಷ್ಠಿತ ಆಸ್ಪತ್ರೆಯನ್ನು ಉಳಿಸಿ, ಬೆಳೆಸುವುದು ಸಂಸ್ಥೆಯ ಧ್ಯೇಯ ಅಂತ ಅವರು ತಿಳಿಸಿದರು.
ಅನೈತಿಕ ಚಟುವಟಿಕೆ ತಾಣವಾಗಿರುವ ಆಸ್ಪತ್ರೆಯ ಸುತ್ತಲೂ ಉದ್ಯಾನವನ ನಿರ್ಮಾಣ, ಜಾಕಿಂಗ್ ಪಾಥ್, ರೋಗಿಗಳು ವಿಶ್ರಾಂತಿ ಪಡೆಯಲು ನಡಿಗೆ ದಾರಿ , ಕುಳಿತುಕೊಳ್ಳಲು ಮೇಜಿನ ವ್ಯವಸ್ಥೆ, ಕಾಂಪೌಂಡ್ಗೆ ಬಣ್ಣ, ಹಾಗು ವಿದ್ಯುತ್ ದೀಪಗಳ ಅಳವಡಿಕೆ ಮಾಡಲಾಗುವುದು ಅಂತ ಅವರು ಹೇಳಿದರು.
ಈ ಸಂದರ್ಭ ಸಂಸ್ಥೆಯ ಕಾರ್ಯಕರ್ತ ಗಿರೀಶ್, ಮುತ್ತಣ್ಣ, ಮoನು, ಸುರೇಶ್ ,ಕುಮಾರ್ ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಇದ್ದರು.