ಮೈಸೂರು: ಕಳೆದ ಒಂದು ತಿಂಗಳಿಂದ ವಿಶೇಷ ಕಾರ್ಯಾಚರಣೆ ನಡೆಸಿದ ಮೈಸೂರು ಸಿಸಿಬಿ ಪೊಲೀಸರ ತಂಡ 10 ಮಂದಿ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 29 ಲಕ್ಷದ 90 ಸಾವಿರದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು ಒಂಭತ್ತು ಮಂದಿ ಮನೆಗಳ್ಳರನ್ನು ಬಂಧಿಸಿರುವ ಮೈಸೂರು ಸಿಸಿಬಿ ಪೊಲೀಸರು 795 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ, 2 ಲಕ್ಷ ನಗದು ಮತ್ತು 7 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕಳವಿಗೆ ಬಳಸಲಾಗುತ್ತಿದ್ದ ಒಂದು ಹೋಡಾ ಕರಿಷ್ಮ ಬೈಕ್ ಅನ್ನು ಸಹ ವಶಕ್ಕೆ ಪಡೆದಿದ್ದಾರೆ.
ಸೈಯದ್ ವಾಸೀಂ(28), ಫಯಾಜ್(32), ಮಹ್ಮದ್ ರಫೀ(30), ಮಷಾದ್ ಅಹ್ಮದ್(24), ಸೈಯದ್ ಅಲೀಂ(24), ಮಹ್ಮದ್ ಮುನ್ನಾ(28), ಉಮ್ಮರ್(23) ಹಾಗೂ ಬಿಎಂಶ್ರೀ ನಗರದ ರವಿ(22), ಕಿರಣ್ ಕುಮಾರ್(20) ಎಂಬುವವರನ್ನು ಬಂಧಿಸಿದ್ದಾರೆ. ಖತರ್ನಾಕ್ ಬೈಕ್ ಕಳ್ಳನಾದ ಮಂಡಿ ಮೊಹಲ್ಲಾದ ಸೈಯದ್ ಇರ್ಫಾನ್(29) ಬೆಂಗಳೂರು ಭಾಗದಲ್ಲಿ ನಕಲಿ ಕೀ ಬಳಸಿ ಒಟ್ಟು ಐದು ಬೈಕ್ಗಳನ್ನು ಅಪಹರಿಸಿದ್ದ, ಈ ಹಿನ್ನಲೆಯಲ್ಲಿ 2 ಪಲ್ಸರ್, 3 ಪ್ಯಾಷನ್ ಪ್ರೋ ಬೈಕ್ಗಳನ್ನು ಈತನಿಂದ ವಶಪಡಿಸಿಕೊಂಡಿದ್ದಾರೆ.
ಒಟ್ಟಾರೆ 9 ಮಂದಿ ಮನೆಗಳ್ಳರು ಹಾಗೂ ಓರ್ವ ಬೈಕ್ ಕಳ್ಳನನ್ನು ಬಂಧಿಸಿರುವ ಮೈಸೂರು ಸಿಸಿಬಿ ಪೊಲೀಸರು 29, ಲಕ್ಷದ 90 ಸಾವಿರ ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ.