ಮೈಸೂರು: ಸದಾ ಹಳೆತನಕೆ ಹೊಸತನ ನೀಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ದೀಪಕ್ ಮೈಸೂರು ಅವರು ನಾಟಕ ನಿರ್ದೇಶನಗಳ ಮೂಲಕ ಭರವಸೆಯ ನಿರ್ದೇಶಕರಾಗಿ ಹೊರ ಹೊಮ್ಮುತ್ತಿದ್ದಾರೆ.
ಇವರ ನಿರ್ದೇಶನದಲ್ಲಿ ಈ ಕಥಾಹಂದರದಲ್ಲಿ ಶನಿವಾರ ನಗರದ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಪ್ರದರ್ಶನವಾದ ಪುಣ್ಯಕೋಟಿ ನಾಟಕ ಪುಣ್ಯಕೋಟಿ. ನಾಟಕ ಪ್ರೇಕ್ಷಕರ ಮನಸ್ಸೆಳೆಯುವಲ್ಲಿ ಯಶಸ್ವಿಯಾಯಿತು. ಭಾರತೀಯ ಜನಪದ ಪರಂಪರೆ ಮತ್ತು ಅದನ್ನು ಸೃಷ್ಟಿಸಿದ ಜಾನಪದ ಮನಸ್ಸು ಕಟ್ಟಿಕೊಟಿರುವ ಬಹುದೊಡ್ಡ ಪ್ರತಿಮೆ ಪುಣ್ಯಕೋಟಿ. ಇದನ್ನು ರಂಗದ ಮೇಲೆ ಪ್ರದರ್ಶಿಸಿ ಅದಕ್ಕೊಂದು ಜೀವ ತುಂಬುವಲ್ಲಿ ಅಷ್ಟೇ ಅಲ್ಲ ನಾಟಕದ ನಂತರವೂ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಸತ್ಯ ಮತ್ತು ಪ್ರೀತಿಗೆ ಸಾವಿಲ್ಲ ಅದು ಅಜರಾಮರ ಎಂದು ಸಾರುವ ಈ ಜನಪದ ರೂಪಕ ಕನ್ನಡದ ಅತ್ಯಂತ ಜನಪ್ರಿಯವಾದ ಜನಪದ ಕಥನಕಾವ್ಯ, ಗೋವಿನಹಾಡು ಎಂದೇ ಚಿರಪರಿಚಿತವಾಗಿರುವ ಈ ಜನಪದ ಕಾವ್ಯ ನೂರಾರು ವರ್ಷಗಳಿಂದ ವರ್ಷಗಳಿಂದ ಮಕ್ಕಳನ್ನು ದೊಡ್ಡವರನ್ನು ಏಕಕಾಲದಲ್ಲಿ ಪ್ರಭಾವಿಸಿದೆ.
ಸಕಲ ಜೀವಿಗಳಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಯ ಅಗತ್ಯವನ್ನು ಸಾರಿಹೇಳುವ ಪುಣ್ಯಕೋಟಿಯ ಕಥನ ನಮಗೆ ಇಂದು ಅತ್ಯಂತ ಜರೂರಾಗಿ ಬೇಕಾಗಿರುವ ಅಂತರ್ ದೃಷ್ಟಿಯಾಗಿದೆ, ಈ ಕಾರಣದಿಂದ ಪ್ರಸ್ತುತ ಪುಣ್ಯಕೋಟಿ ಮಕ್ಕಳ ನಾಟಕವನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಹೇಳುವ ಅವರು, ಅನೇಕ ಕಡೆಗಳಲ್ಲಿ ಅನೇಕ ರೀತಿಗಳಲ್ಲಿ ರಂಗದ ಮೇಲೆ ಬಂದಿದ್ದರೂ ಪ್ರಸ್ತುತ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ಈ ಪುಣ್ಯಕೋಟಿ ನಾಟಕವನ್ನು ರೂಪಿಸಲಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಹುಲಿ ಹುಲ್ಲು ತಿನ್ನುವುದಿಲ್ಲ. ಮಾಂಸವೇ ಅದರ ಆಹಾರ. ಇದೆ ನಿಸರ್ಗದ ಸತ್ಯ, ಮಾಂಸವನ್ನು ತಿನ್ನುವುದಿಲ್ಲ ಎಂದರೆ? ಹುಲಿ ಏನನ್ನು ತಿನ್ನಬೇಕು. ನೀನು ನನ್ನನ್ನು ತಿನ್ನದಿದ್ದರೆ ನಿನ್ನವರೆ ನಿನ್ನನ್ನು ಬದುಕಲು ಬಿಡುವುದಿಲ್ಲ. ಹುಲಿರಾಯನೆ ನನ್ನನ್ನು ತಿಂದು ನಿಸರ್ಗದ ಸತ್ಯವನ್ನು ಪಾಲಿಸು ಎಂದು ಹಸು ಪುಣ್ಯಕೋಟಿ ಹೇಳುವುದರ ಮೂಲಕ ಪುಣ್ಯಕೋಟಿಯ ಮುಕ್ತಾಯವಾಗುತ್ತದೆ.
ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿ ಮಕ್ಕಳು ಮತ್ತು ಪ್ರೇಕ್ಷಕರಿಗೆ ಬಿಟ್ಟಿದ್ದೇವೆ. ಕ್ರೌರ್ಯ ಮತ್ತು ಪ್ರೀತಿ ನಡುವಿನ ಸಂಘರ್ಷದಲ್ಲಿ ಯಾವತ್ತೂ ಕ್ರೌರ್ಯಕ್ಕೆ ಜಯವಿಲ್ಲ ಎನ್ನುವುದು ಪುಣ್ಯಕೋಟಿಯ ಸಂದೇಶ ಎನ್ನುತ್ತಾರೆ ದೀಪಕ್ ಮೈಸೂರು.
ಹಾಗೆ ನೋಡಿದರೆ ದೀಪಕ್ ಮೈಸೂರು ಅವರು ನೀನಾಸಂ ರಂಗಶಿಕ್ಷಣ ಕೇಂದ್ರದಿಂದ ನಾಟಕ ಡಿಪ್ಲೊಮಾ ಪಡೆದವರು. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ನೀಡುವ “Young artist’s scholarship”ಪಡೆದವರು. ಸಾಕ್ಷರತಾ ಆಂದೋಲನದಲ್ಲಿ ಜಿಲ್ಲಾ ಸಂಯೋಜಕರಾಗಿ ಕಲಿಯುವ ವಾತವರಣ ನಿರ್ಮಾಣಕ್ಕೆ ಸಂಬಂದಿಸಿದಂತೆ ನೂರಾರು ಕಲಾವಿದರಿಗೆ ರಂಗತರಬೇತಿ ಶಿಬಿರಗಳ ಆಯೋಜನೆ ಮತ್ತು ನಾಟಕಗಳ ನಿರ್ದೇಶನ. ರಾಷ್ಟ್ರೀಯ ನಾಟಕ ಶಾಲೆ ಪ್ರಾದೇಶಿಕ ಸಂಪನ್ಮೂಲ ಕೇಂದ್ರದಲ್ಲಿ ಸಂಯೋಜಕರಾಗಿ ಹಾಗೂ ಸಂಪನ್ಮೂಲವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ರಂಗಾಯಣ ಆಯೋಜಿಸುವ ಚಿಣ್ಣರ ಮೇಳದಲ್ಲಿ ಮಕ್ಕಳ ನಾಟಕ ನಿರ್ದೇಶನ ಹಾಗೂ ಯುವರಂಗೋತ್ಸವದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ನಿರ್ದೇಶನ.
ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಕಾರಾಗೃಹವಾಸಿಗಳ ಮನಪರಿವರ್ತನ ರಂಗತರಬೇತಿ ಶಿಬಿರದ ನಿರ್ವಾಹಕರು ಹಾಗೂ ನಾಟಕದ ಸಹ-ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಜನಾಧಿಕಾರ ಜನಾಂದೋಲನದ ಕಲಾಜಾಥದ ಸಂಘಟಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಮಳೆನೀರು ಸಂಗ್ರಹಣೆ ಕುರಿತಾದ ಜಲಜಾಥದ ಸಂಪನ್ಮೂಲ ವ್ಯಕ್ತಿ. ಮಕ್ಕಳ ರಂಗತರಬೇತಿ ಶಿಬಿರ, ಕಾಲೇಜು ರಂಗತರಬೇತಿ ಶಿಬಿರ, ಮಹಿಳಾ ರಂಗತರಬೇತಿ ಶಿಬಿರಗಳ ನಿರ್ದೇಶಕರು, ಮಹಾತ್ಮರ ಪ್ರತಿಮೆ, ಈಡಿಪಸ್. ಕತ್ತಲೆ ದಾರಿ ದೂರ, ಊರುಭಂಗ, ಹೆಣ್ಣೇಂಬ ಜೀವ, ಗಾರ್ಮೆಂಟ್ಸ್ ನಲ್ಲಿ ಒಂದು ದಿನ, ಅಂತಿಗೊನೆ, ನೀರು ಕಳೆದಿದೆ, ಋತುಯಾತ್ರೆ, ಇನ್ನೂ ಮುಂತಾದ ನಾಟಕಗಳ ನಿರ್ದೇಶನ. ಧಾಂಧೂಂ ಸುಂಟರಗಾಳಿ, ನನ್ನ ಗೋಪಾಲ, ಕೆಂಪು ಸೂರ್ಯ, ಗೋವಿನ ಹಾಡು, ಸೂರ್ಯ ಬಂದ, ಕಿಂದರಿಜೋಗಿ, ಆಳಿಲು ರಾಮಾಯಣ, ಝುಂ ಝುಂ ಆನೆ, ಕಂಸಾಯಣ, ಅಜ್ಜಿ ಕಥೆ, ಚಂದ್ರಹಾಸ, ಅಲಿಬಾಬ ಮತ್ತು ನಲವತ್ತು ಕಳ್ಳರು, ಎಚ್ಚಮನಾಯಕ,ಪುಷ್ಪರಾಣಿ, ಒಗಟಿನ ರಾಣಿ ಇನ್ನೂ ಮುಂತಾದ ಮಕ್ಕಳನಾಟಕಗಳ ನಿರ್ದೇಶನಮಾಡಿರುವ ಹೆಮ್ಮೆ ದೀಪಕ್ ಮೈಸೂರು ಅವರದ್ದಾಗಿದೆ.