ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಹಿಂಬದಿಯ ಸವಾರಿಗೂ ಹೆಲ್ಮೇಟ್ ಕಡ್ಡಾಯವಾಗಿದ್ದು, ವಾಹನ ಸವಾರರಿಗೆ ಸಂಚಾರಿ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ನಗರದಲ್ಲಿ ನಿಯಮ ಪಾಲಿಸಿದವರಿಗಿಂತ ಉಲ್ಲಂಘಿಸಿದವರೇ ಹೆಚ್ಚಾಗಿದ್ದಾರೆ. ಇದರಲ್ಲಿ ಪೊಲೀಸಪ್ಪನೊಬ್ಬ ಹಿಂಬದಿಯ ಸವಾರನಿಗೆ ಹೆಲ್ಮೇಟ್ ಹಾಕಿಸದೇ ರಸ್ತೆಯಲ್ಲಿ ಸಂಚರಿಸಿದ್ದಾರೆ.
ರಾಜ್ಯದಾದ್ಯಂತ ಇತರ ನಗರಗಳಲ್ಲೂ ಇಂದಿನಿಂದ ಹಿಂಬದಿ ಸವಾರರಿಗೂ ಹೆಲ್ಮೇಟ್ ಕಡ್ಡಾಯವಾಗಿರುವ ಹಿನ್ನಲೆಯಲ್ಲಿ ಕಟ್ಟುನಿಟ್ಟಿನ ನಿಯಮ ಪಾಲನೆಗೆ ಸಂಚಾರಿ ಪೊಲೀಸರು ಮುಂದಾಗಿದ್ದು ಬೆಳ್ಳಗ್ಗೆಯಿಂದಲೇ ದಂಡವಿಧಿಸಲು ಪೊಲೀಸರು ಸಜ್ಜಾಗಿದ್ದಾರೆ. ಅದರಂತೆ ಸಾಂಸ್ಕೃತಿಕ ನಗರಿಯಲ್ಲೂ ಸಹ ದ್ವಿಚಕ್ರವಾಹನದ ಹಿಂಬದಿಯ ಸವಾರರು ಪೊಲೀಸರ ಕೈಗೆ ಸಿಕ್ಕಿಬಿದ್ದು 100 ದಂಡ ಪಾವತಿಸಿ ಮುಂದೆ ಹೋಗುತ್ತಿದ್ದರೆ ಕೆಲವರು ಎಚ್ಚರಿಕೆಯಿಂದಲೇ ಹೆಲ್ಮೇಟ್ ಧರಿಸಿಕೊಂಡಿದ್ದಾರೆ. ನಗರದ ಎಲ್ಲಾ ಪ್ರಮುಖ ವೃತ್ತ ಹಾಗೂ ರಸ್ತೆ ಇಕ್ಕೆಲಗಳಲ್ಲಿ ಭರ್ಜರಿ ಹೆಲ್ಮೇಟ್ ಭೇಟಿಗೆ ನಿಂತಿರುವ ಸಂಚಾರಿ ಪೊಲೀಸರು
ಇನ್ನಿಲ್ಲದ ಬಿರುಸಿನ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ. ಇನ್ನೂ ಕೆಲವು ಬೈಕ್ ಸವಾರರು ಪೊಲೀಸರು ಸಿಗದ ರೀತಿಯಲ್ಲಿ ಸಿಗ್ನಲ್ ಜಂಪ್ ಮಾಡಿಕೊಂಡು ಹೋಗುತ್ತಿದ್ದ ಘಟನೆಯೂ ಸಹ ನಗರದ ಹಲವೆಡೆ ನಡೆದಿದೆ. ಹಿಂಬದಿಯ ಸವಾರರಿಗೆ ಮೊದಲ ದಿನದ ಹೆಲ್ಮೇಟ್ ಬಿಸಿ ತಟ್ಟಿದೆಯಾದರೂ ಹೆಲ್ಮೇಟ್ ನಿಯಮ ಪಾಲಿಸಿದವರಿಗಿಂತ ಉಲ್ಲಂಘಿಸಿದವರೇ ಹೆಚ್ಚು ಎನ್ನಬಹುದು. ಇನ್ನೂ ಕೆಲವರು ಟ್ರಾಫಿಕ್ ಪೊಲೀಸರು ಕಾಣಿಸುತ್ತಿದ್ದಂತೆ ಹಿಂಬದಿಯ ಸವಾರರನ್ನೇ ಕೆಳಗಿಳಿಸಿ ಬರುತ್ತಿದ್ದದ್ದು ನಗರದಲ್ಲಿ ಕಂಡು ಬಂದಿದೆ.
ಮೊದಲ ಬಾರಿಗೆ 100 ರೂ ಎರಡನೇ ಬಾರಿ ಸಿಕ್ಕಿ ಬಿದ್ದರೆ 300 ರೂ ಮೂರನೇ ಬಾರಿಗೆ ಸಿಕ್ಕಿ ಬಿದ್ದರೇ ಡಿಎಲ್ ಲೈಸೈನ್ಸ್ ರದ್ದುಗೊಳಿಸುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಕಾನೂನು ಪಾಲಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿರುವ ಪೊಲೀಸ್ ಇಲಾಖೆಯ ಪೇದೆಯೊಬ್ಬರು ಮೊದಲ ದಿನವೇ ನಿಯಮ ಉಲ್ಲಂಘಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಿಂಬದಿಯ ಸವಾರನಿಗೆ ಹೆಲ್ಮೇಟ್ ಹಾಕಿಸದೇ ಹಾಗೆಯೇ ವಾಹನ ಸಂಚಾರ ಮಾಡಿ ಪೊಲೀಸ್ ಪೇದೆಯೊಬ್ಬ ಕಾನೂನು ಇರುವುದು ನಾಗರೀಕರಿಗೆ ನಮಗಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.