ಮೈಸೂರು: ಮೈಸೂರಿನ ರಿಂಗ್ ರಸ್ತೆಯಲ್ಲಿ ಬೆಳ್ಳಂಬೆಳ್ಳಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಕೆಳಗೆ ಬಿದ್ದ ಮಹಿಳೆ ಮೇಲೆ ಟ್ರಕ್ ಹರಿದ ಪರಿಣಾಮ ಸ್ಥಳದಲ್ಲೇ ದಂಪತಿಗಳಿಬ್ಬರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕೊತ್ತೇಗಾಲದ ಕೋದಂಡರಾಮು(45), ಹೇಮವತಿ(35) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಬೋಗಾದಿಯಿಂದ ರಿಂಗ್ ರಸ್ತೆಯ ಸಿಗ್ನಲ್ ದಾಟುವಾಗಿ ಟಿಪ್ಪರ್ ಡಿಕ್ಕಿ ಹೊಡೆದು ಹೇಮಾವತಿಯ ಮೇಲೆ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ತೀವ್ರವಾಗಿ ಗಾಯಗೊಂಡಿದ್ದ ಕೋದಂಡರಾಮು ಅವರನ್ನು ಚಿಕಿತ್ಸಗೆ ಕರೆದೊಯ್ಯುವ ಮಾರ್ಗದಲ್ಲೇ ಅಸುನೀಗಿದ್ದಾರೆ. ಈ ಸಂಬಂಧ ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಟಿಪ್ಪರ್ ವಶಕ್ಕೆ ಪಡೆದಿರುವ ಕುವೆಂಪುನಗರ ಸಂಚಾರಿ ಠಾಣೆ ಪೊಲೀಸರು ಚಾಲಕ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ.
ರಿಂಗ್ ರಸ್ತೆಯಲ್ಲಿ ವೇಗವಾಗಿ ಬರುವ ಲಾರಿ ಚಾಲಕರ ಅತಿವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸಂಚಾರಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.