ಮೈಸೂರು: ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವನ್ನು ಲಘುವಾಗಿ ಪರಿಗಣಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ವಜಾಗೊಳಿಸಿ ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.
ಮೈಸೂರಿನ ವಿವಿಧ ದಲಿತ ಸಂಘಟನೆಗಳ ಸಾವಿರಾರು ಮಂದಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ರೋಹಿತ್ ಸಾವಿಗೆ ನ್ಯಾಯಾ ದೊರಕಿಸುವಂತೆ ಆಗ್ರಹಿಸಿದರು. ಅಲ್ಲದೆ ಎಲ್ಲಾ ವಿವಿಗಳಲ್ಲೂ ದಲಿತ ವಿದ್ಯಾರ್ಥಿಗಳನ್ನು ಕಡೆಗಣಿಸುತ್ತಿದ್ದು ಸೂಕ್ತ ರೀತಿಯಲ್ಲಿ ಪರಿಗಣಿಸುವಂತೆ ಒತ್ತಾಯಿಸಿದರು.
ವಿದ್ಯಾರ್ಥಿ ರೋಹಿತ್ ಸಾವಿಗೆ ಸಂಬಂಧಿಸಿದಂತೆ ಎಬಿವಿಪಿ ಸಂಘಟನೆಯನ್ನು ಬಂಧಿಸಬೇಕು ಹಾಗೂ ಪ್ರಕರಣವನ್ನು ಲಘುವಾಗಿ ಪರಿಗಣಿಸಿರುವ ಹೈದರಾಬಾದ್ ಕೇಂದ್ರಿಯ ವಿಶ್ವ ವಿದ್ಯಾನಿಲಯದ ಕುಲಪತಿಗಳನ್ನು ವಜಾಗೊಳಿಸಬೇಕು. ಅಲ್ಲದೆ ಸಾವಿನಲ್ಲೂ ಜಾತಿ ರಾಜಕಾರಣ ಮಾಡಬಾರದು ಎಂಬ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಸುಬ್ರಹ್ಮಣ್ಯ ಸ್ವಾಮಿ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾಗಿರುವ ರಂಗಪ್ಪರವರ ಮೇಲೂ ಸಹ ಅನೇಕ ಆರೋಪಗಳಿದ್ದು, ಅವರನ್ನೇ ಮುನ್ನಡೆಸುತ್ತಿರುವ ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಕಾರರು ಮೈಸೂರು ವಿವಿಯಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಇದನ್ನು ತಡೆಗಟ್ಟುವಂತೆ ಆಗ್ರಹಿಸಿದರು.