ಮೈಸೂರು: ಗ್ರಾಮ ಪಂಚಾಯಿತಿಯ ಡಿಗ್ರೂಪ್ ಸ್ಲೀಪರ್ ಹುದ್ದೆ ಉಳಿಸಿಕೊಳ್ಳಲು ಅಳಿಯನನ್ನೇ ಸೋದರಮಾವ ಹತ್ಯೆಗೈದ ಘಟನೆ ಇಲ್ಲಿನ ಹೊಸುಂಡಿ ಗ್ರಾಮದಲ್ಲಿ ನಡೆದಿದೆ.
ಬರ್ಬರವಾಗಿ ಕೊಲೆಯಾದವನು ವಿಷ್ಣು(18) ತನ್ನ ತಂದೆ ನಾಗರಾಜುವಿನ ಡಿಗ್ರೂಪ್ ಸ್ಲೀಪರ್ ನೌಕರಿ ಕೇಳುತ್ತಾನೆ ಎಂಬ ಕೋಪಕ್ಕೆ ಸ್ಕೆಚ್ ಹಾಕಿ ಆತನನ್ನು ಕರೆದೊಯ್ದು ಕಟ್ಟಿಹಾಕಿ ಕುತ್ತಿಗೆ ಬಿಗಿದು ಹೊಡೆದು ಕೊಲೈಗೈದಿರುವ ಸೋದರಮಾವ ರಾಜು ಎನ್ನಲಾಗಿದ್ದು, ಈ ಸಂಬಂಧ ವಿಷ್ಣುವಿನ ಅಜ್ಜಿ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಹೊಸುಂಡಿ ಗ್ರಾಮ ಪಂಚಾಯಿತಿಯಲ್ಲಿ ಡಿಗ್ರೂಪ್ ನೌಕರನಾಗಿದ್ದ ತಂದೆ ನಾಗರಾಜು 10 ವರ್ಷದ ಹಿಂದೆ ಅಕಾಲಿಕವಾಗಿ ಸಾವನ್ನಪ್ಪಿದಾಗ ವಿಷ್ಣು ಅಪ್ರಾಪ್ತನಾಗಿದ್ದ ಕಾರಣಕ್ಕೆ ನಾಗರಾಜುವಿನ ಜಾಗಕ್ಕೆ ವಿಷ್ಣುವಿನ ಸೋದರಮಾವ ರಾಜುಗೆ ಕೊಡಲಾಗಿತ್ತು. ಈಗ ವಿಷ್ಣು 18 ವರ್ಷ ಪೂರೈಸಿದ್ದು ಆತನಿಗೆ ತಂದೆ ಕೆಲಸವನ್ನು ಕೊಡಿ ಎಂದು ಅಜ್ಜಿ ಕೇಳಿದ್ದು, ಈ ಬಗ್ಗೆ ಮಗಳ ಗಂಡ ರಾಜುವಿನಲ್ಲಿ ಮೊಮ್ಮಗನಿಗೆ ನೌಕರಿಯನ್ನು ಬಿಟ್ಟುಕೊಡುವಂತೆ ಕೇಳಿದ್ದಾಳೆ.
ಆದರೆ ಈಗಾಗಲೇ ಡಿಗ್ರೂಪ್ ಕೆಲಸದಲ್ಲಿ ಜೀವನ ನಡೆಸುತ್ತಿರುವ ರಾಜುಗೆ ನೌಕರಿ ಬಿಟ್ಟುಕೊಡಲು ಇಷ್ಟವಿಲ್ಲದೆ ಸೋದರ ಅಳಿಯನ ಕೊಲೆಗೆ ಸ್ಕೆಚ್ ಹಾಕಿದ್ದಾನೆ. ವಿಷ್ಣುವಿಗೆ ಕಂಠಪೂರ್ತಿ ಕುಡಿಸಿ ಕೈಕಾಲುಗಳನ್ನು ಕಟ್ಟಿಹಾಕಿ ಕುತ್ತಿಗೆಗೆ ಹಗ್ಗ ಬಿಗಿದು ಬರ್ಬರವಾಗಿ ಕೊಲೆ ಮಾಡಿ ಬಿಸಾಕಿದ್ದಾನೆ.
ಆದರೆ ಏನೂ ಗೊತ್ತಿಲ್ಲದವನಂತೆ ನಾಟಕವಾಡುತ್ತಿದ್ದ ಈತನ ಮೇಲೆ ಅನುಮಾನಗೊಂಡ ಅಜ್ಜಿ ನನ್ನ ಮೊಮ್ಮಗನ ಕೊಲೆಯನ್ನು ಅಳಿಯನೇ ಮಾಡಿದ್ದಾನೆ ಎಂದು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಸಂಬಂದ ರಾಜುನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.