ಮೈಸೂರು: ಮೀಟರ್ ಬಡ್ಡಿಯವರ ಕಾಟ ತಾಳಲಾರದೆ ವ್ಯಕ್ತಿಯೋರ್ವ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಗೌಸಿಯಾ ನಗರದಲ್ಲಿ ನಡೆದಿದೆ.
ಮಹಮದ್ ರಿಜ್ವಾನ್(26) ಆತ್ಮಹತ್ಯೆಗೈದ ವ್ಯಕ್ತಿ. ಸಣ್ಣದೊಂದು ಪೆಟ್ಟಿಗೆ ಅಂಗಡಿಯಲ್ಲಿ ಆಟೋ ಮೆಕ್ಯಾನಿಕ್ ಆಗಿ ಜೀವನ ನಡೆಸುತ್ತಿದ್ದ ಈತ ಅಂಗಡಿ ನಡೆಸಲು ಮೀಟರ್ಯಲ್ಲಿ 20 ಸಾವಿರ ಹಣ ಸಾಲ ಪಡೆದಿದ್ದನು. ಆ ಸಾಲಕ್ಕೆ 2 ಲಕ್ಷದವರೆಗೂ ಬಡ್ಡಿ ಕಟ್ಟಿದ ಈತ ಕೆಲವು ತಿಂಗಳು ಬಡ್ಡಿಕಟಲು ಕಾರಣಾಂತರಗಳಿಂದ ತಡ ಮಾಡಿದನು. ಇದರಿಂದ ಕುಪಿತ ಗೊಂಡ ಮೀಟರ್ ಬಡ್ಡಿಕೋರರು ಆತನನ್ನು ನಡು ರಸ್ತೆಯಲ್ಲೇ ಅಡ್ಡಗಟ್ಟಿ ಬಡ್ಡಿಕೊಡದಿದ್ದರೆ ಮನೆಗೆ ಬೀಗಹಾಕಿ ಸಾಮಾನು ಹೊತ್ಕೊಂಡು ಹೋಗ್ತೀವಿ ಎಂದು ಬೆದರಿಕೆ ಹಾಕಿದ್ದರು. ಎಲ್ಲರ ಮುಂದೆ ಬೆದರಿಕೆ ಹಾಕಿದ್ದಕ್ಕೆ ಮನನೊಂದಿದ್ದ ರಿಜ್ವಾನ್ ಬಡ್ಡಿ ತೀರಿಸಲಾಗದೆ ಕಳೆದ ಜನವರಿ 9 ರಂದು ತನ್ನ ಪೆಟ್ಟಿಗೆ ಅಂಗಡಿಯಲ್ಲಿ ಆಸಿಡ್ ಕುಡಿದು ಅಸ್ವಸ್ಥನಾಗಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ನಡುವೆ ಕಳೆದ 26 ದಿನಗಳ ಕಾಲ ಹೋರಾಟ ನಡೆಸಿದ ರಿಜ್ವಾನ್ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಆಸಿಡ್ ಕುಡಿದ ಮಹಮದ್ ರಿಜ್ವಾನ್ ತನಗೆ ಕಿರುಕುಳ ನೀಡಿದ ಮಹಮದ್, ಯೋಗೇಶ್, ಮುನಾವರ್ ಎಂದು ಹೇಳಿಕೆ ನೀಡಿದ್ದು ಇವರು ನನಗೆ ಯಾವ ಯಾವ ರೀತಿ ಕಾಟಕೊಟ್ಟರು ಎಂಬುದನ್ನು ಹೇಳಿಕೆ ನೀಡಿ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಉದಯಗಿರಿ ಠಾಣಾ ಪೊಲೀಸರು ಮುನಾವರ್ ನನ್ನು ಬಂಧಿಸಿದ್ದು, ಪರಾರಿಯಾಗಿರುವ ಅಹಮದ್ ಹಾಗೂ ಯೋಗೇಶ್ ರ ಪತ್ತೆಗೆ ಬಲೆ ಬೀಸಿದ್ದಾರೆ.