ಮೈಸೂರು: ದೇಶದಲ್ಲಿರುವ ಪ್ರಮುಖ ದೇವಾಲಯಗಳ ಹುಂಡಿಯಲ್ಲಿರುವ ಹಣವನ್ನು ಸಂಕಷ್ಟದಲ್ಲಿರುವ ರೈತರಿಗೆ ನೀಡಲಿ ಎಂದು ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಪ್ರಮುಖ ದೇವಾಲಯದಲ್ಲಿ ಇರುವ ಒಟ್ಟು 20 ಸಾವಿರ ಟನ್ ನಷ್ಟು ಹಣವನ್ನು ಸುಗ್ರಿವಾಜ್ಞೆ ಹೊರಡಿಸಿ ವಶಪಡಿಸಿಕೊಂಡು ಅದನ್ನು ಬ್ಯಾಂಕ್ನಲ್ಲಿ ಇಡಬೇಕು. ಅಲ್ಲದೆ ಅದರಿಂದ ಬರುವ ತೆರಿಗೆ ಮೊತ್ತ 50 ಲಕ್ಷ ಕೋಟಿ ಹಣವನ್ನು ದೇಶದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ನೀಡಲಿ. ಜತೆಗೆ ಮಕ್ಕಳ ಶಿಕ್ಷಣ, ಆಹಾರಕ್ಕೆ ಅನುಕೂಲವಾಗುವ ಯೋಜನೆಗಳಿಗೆ ಸದುಪಯೋಗ ಪಡಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಜನವರಿ 12 ರಂದು ಬಣ್ಣಾರಿ ಅಮ್ಮನ ಕಾರ್ಖಾನೆಗೆ ಮುತ್ತಿಗೆ ಹಾಕಿದಾಗ 2 ವಾರದಲ್ಲಿ ರೈತರ ಕಬ್ಬಿನ ಬಾಕಿ ಹಣ ಪಾವತಿಸುವುದಾಗಿ ಲಿಖಿತವಾಗಿ ಜಿಲ್ಲಾಡಳಿತಕ್ಕೆ ತಿಳಿಸಿ ಹಣ ನೀಡದೆ ವಂಚಿಸಿದೆ. ಈ ಸಂಬಂಧ ಕಬ್ಬು ಬೆಳೆಗಾರರ ಹಣ ಕೊಡಿಸುವಲ್ಲಿ ವಿಫಲರಾಗಿರುವ ನಿಷ್ಕ್ರಿಯ ರಾಜಕಾರಣಿಗಳಾದ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ವಿ. ಶ್ರೀನಿವಾಸ್ ಹಾಗೂ ಸಹಕಾರ ಸಚಿವ ಮಹದೇವ್ಪ್ರಸಾದ ಸೇರಿದಂತೆ ಜನಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಫೆ.10 ರೊಳಗೆ ಕಬ್ಬು ಬೆಳೆಗಾರರ ಹಣ ಕೊಡಿಸದಿದ್ದಲಿ ಜನನಾಯಕರ ಮನೆಮುಂದೆ ನಿರಂತರ ಧರಣಿ ನಡೆಸುವುದಾಗಿ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಇದರ ಪರಿಣಾಮ ಬೀರುವಂತೆ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.