ಮೈಸೂರು: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಶುಭ ಶುಕ್ರವಾರದಂದು ಜಿಪಂಗೆ 178 ಹಾಗೂ ತಾಪಂ ಗೆ 380 ನಾಮಪತ್ರಗಳ ಸುರಿಮಳೆಯೇ ಬಂದಿದೆ.
ಸಿಎಂ ತವರು ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸ್ವಲ್ಪ ಕಡಿಮೆ ಇದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಅದರಲ್ಲೂ ಗ್ರಾಮೀಣ ಜನತೆಗೆ ಸ್ಥಳೀಯ ಸಂಸ್ಥೆಗಳ ಈ ಚುನಾವಣೆ ಸ್ವಪ್ರತಿಷ್ಟೆಯ ಕಣವಾಗಿದ್ದು, ಇನ್ನೂ ಆಯಾ ಪಕ್ಷದ ಎಂಎಲ್ಎ ಹಾಗೂ ಮುಖಂಡರಿಗಳಿಗೂ ತಮ್ಮ ಕಾರ್ಯಕರ್ತರನ್ನು ಮುಂದಿನ ವಿಧಾನ ಸಭಾ ಚುನಾವನೆ ದೃಷ್ಟಿಯಿಂದ ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯವಿದೆ. ಈ ಹಿನ್ನಲೆಯಲ್ಲಿ ಮೈಸೂರಿನ ಹಿನಕಲ್, ಸಿದ್ಧಲಿಂಗಪುರ, ಶ್ರೀರಾಪುರ, ವರುಣಾ ಜಿಲ್ಲಾ ಪಂಚಾಯಿತಿಗಳಲ್ಲಿ ಹೆಚ್ಚಿನ ಹಣಾಹಣಿ ಎರ್ಪಟ್ಟಿವೆ. ನಾಮಪತ್ರ ಸಲ್ಲಿಕೆಗೆ ಐದನೇ ದಿನವಾದ ಇಂದು ಅಭ್ಯರ್ಥಿಗಳು ಶುಭ ಶುಕ್ರವಾರ ಚಾಮುಂಡಿಬೆಟ್ಟ ಸೇರಿದಂತೆ ಹಲವು ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬಹುಪಾಲು ಮಂದಿ ಬೆಂಬಲಿಗರೊಂದಿಗೆ ತಾಲೂಕು ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಬರೋಬ್ಬರಿ ಒಂದೇ ದಿನಕ್ಕೆ ಮೈಸೂರು ಜಿಲ್ಲೆಯಾದ್ಯಂತ ಪಕ್ಷೇತರ ಅಭ್ಯರ್ಥಿಗಳು ಹಾಗೂ ಎಲ್ಲಾ ಪಕ್ಷದ ಮುಖಂಡರು ಸೇರಿದಂತೆ ಒಟ್ಟು 178 ಉಮೇದುವಾರಿಕೆಯನ್ನು ಜಿಲ್ಲಾ ಪಂಚಾಯಿತ್ ಗೆ ಸಲ್ಲಿಸಿದ್ದಾರೆ. ಈ ಪೈಕಿ ಜೆಡಿಎಸ್ ನ 60 ಮಂದಿ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದರೆ, ಕಾಂಗ್ರೆಸ್ ನ 43 ಮಂದಿ, ಬಿಜೆಪಿಯ 31 ಮಂದಿ, ಬಿಎಸ್ಪಿಯಿಂದ 1, ಸಿಪಿಐಯಿಂದ 1, ಸಿಪಿಐ(ಎಂ) 1, ಕೆಜಿಪಿ1, ಎನ್ಸಿಪಿ 1 ಹಾಗೂ ಪಕ್ಷೇತರವಾಗಿ 41 ಮಂದಿ ಜಿಲ್ಲಾ ಪಂಚಾಯಿತಿಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತಾಲೂಕು ಪಂಚಾಯಿತಿ ನಾಮಪತ್ರ ಸಲ್ಲಿಕೆಯಲ್ಲೂ ಅಬ್ಬರ ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್ ನಿಂದ 133 ನಾಮಪತ್ರ ಸಲ್ಲಿಕೆಯಾಗಿದ್ದರೆ, ಜೆಡಿಎಸ್ ನಿಂದ 132, ಬಿಜೆಪಿ 59, ಬಿಎಸ್ಪಿ 5, ಸಿಪಿಐ(ಎಂ) ಹಾಗೂ ಪಕ್ಷೇತರ 50 ಮಂದಿ ಒಂದೆ ದಿನ ತಾಲೂಕು ಪಂಚಾಯಿತಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ರಾಜ್ಯಕೀಯವಾಗಿ ಈಗಾಗಲೇ ಮೂರು ಪಕ್ಷಗಳಲ್ಲಿ ಈಗಾಗಲೇ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಿತ್ತಾಟ ಶುರುವಾಗಿದ್ದು, ಜೆಡಿಎಸ್ ನ ಶಾಸಕ ಜಿಟಿ ದೇವೇಗೌಡರ ವಿರುದ್ಧ ಶಾಸಕ ಚಿಕ್ಕಮಾದು ಹಾಗೂ ಮಾಜಿ ಜಿಪಂ ಅಧ್ಯಕ್ಷೆ ಸುನೀತಾ ವೀರಪ್ಪಗೌಡ ವರಿಷ್ಠರ ಎದುರೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ತಮ್ಮ ವ್ಯಾಪ್ತಿಯ ಹುಣಸೂರು ಕ್ಷೇತ್ರದ ಟಿಕೆಟ್ ಅಭ್ಯರ್ಥಿ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಶಾಸಕ ಚಿಕ್ಕಮಾದು ದೂರಿದ್ದರೆ, ತಿ.ನರಸೀಪುರದಲ್ಲಿ ನಮ್ಮ ಬೆಂಬಲಿಗರಿಗೆ ಭಿಫಾರಂ ನೀಡಿಲ್ಲವೆಂದು ಶಾಸಕ ದೇವೇಗೌಡರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಬಿಜೆಪಿಯಲ್ಲೂ ಸಹ ಅಸಮಾಧಾನದ ಹೊಗೆ ಎದ್ದಿದ್ದು, ಶ್ರೀರಾಂಪುರ ಜಿಪಂ ಬಿಜೆಪಿ ಆಕಾಂಕ್ಷಿಯಾಗಿದ್ದ ಆಲನಹಳ್ಳಿ ಪುಟ್ಟಸ್ವಾಮಿ ಪಕ್ಷ ಭಿಫಾರಂ ನೀಡದ ಹಿನ್ನಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.