ಮೈಸೂರು: ಪ್ರತಿದಿನ ಪತ್ನಿಯ ಮೇಲೆ ಸಂಶಯಪಡುತ್ತಿದ್ದ ಪತಿ ಆಕೆಗೆ ಬೆಂಕಿ ಹಚ್ಚಿ ಅಮಾನುಷವಾಗಿ ಸಾಯಿಸಿರುವ ಘಟನೆಯೊಂದು ಹೆಚ್.ಡಿಕೋಟೆ ತಾಲೂಕಿನ ಸರಗೂರು ಸಮೀಪದ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪತಿ ಗುರುಸಿದ್ದಯ್ಯ ಪತ್ನಿ ಕೆಂಪಮ್ಮ(35)ನನ್ನು ಕೊಲೆಗೈದವ. ಮದುವೆಯಾಗಿ 20 ವರ್ಷವಾಗಿದ್ದು ಅಂದಿನಿಂದಲೂ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದ ಗುರುಸಿದ್ದಯ್ಯ ಒಂದು ದಿನವೂ ಆಕೆಯನ್ನು ತವರು ಮನೆಗೆ ಕಳುಹಿಸಿಯೇ ಇರಲಿಲ್ಲ. ಆಕೆ ಎಲ್ಲಿ ಹೋದರು ತಾನೂ ಹಿಂದೆಯೇ ಹೋಗಿ ಜತೆಗೆ ಅವಳನ್ನು ಕರೆತರುತ್ತಿದ್ದನು. ಆಕೆಯನ್ನು ಯಾರೊಂದಿಗೂ ಮಾತನಾಡದಂತೆ ನೋಡಿಕೊಳ್ಳುತ್ತಿದ್ದ, ಒಂದು ವೇಳೆ ಸಹೋದರರೊಂದಿಗೂ ಮಾತನಾಡಿದರು ಅದಕ್ಕೆ ಅಕ್ರಮ ಸಂಬಂಧ ಕಲ್ಪಿಸಿ ಇನ್ನಿಲ್ಲದ ಕಿರುಕುಳ ನೀಡಿ ಸಾಯಿಸುವುದಾಗಿ ಹೇಳುತ್ತಿದ್ದನು. ಇದೇ ಕಾರಣಕ್ಕೆ ಊರನ್ನೇ ಬಿಟ್ಟಿದ್ದ ಆತ ಊರಿನ ಹೊರಗಿನ ಮನೆಯೊಂದರಲ್ಲಿ ವಾಸವಾಗಿದ್ದು ಕುಡಿದು ಬಂದು ನಿತ್ಯ ಕಿರುಕುಳ ನೀಡುತ್ತಿದ್ದನು.
ಅಪ್ಪ ಬೇಕೆಂದ ಮಗ: ತಾಯಿ ಹೆಣವನ್ನೇ ಬಿಟ್ಟು ಹೋದ
ತಂದೆಯಿಂದಲೇ ತಾಯಿ ಕೊಲೆಯಾಗಿ ಬಿದ್ದಿರುವ ವೇಳೆಯಲ್ಲಿ ತಾಯಿಯ ಸಹೋದರರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಕ್ಕೆ, ಇಲ್ಲ ನನಗೆ ತಂದೆ ಬೇಕು ಆತನ ವಿರುದ್ಧ ದೂರು ನೀಡಬೇಡಿ ಎಂದು ತಂದೆ ಪರವಾಗಿ ನಿಂತ ಮಗನ ವಿರುದ್ಧ ಮೃತಳ ಸಹೋದರರು ವಿರೋಧಿಸಿ ಛೀಮಾರಿ ಹಾಕುತ್ತಿದ್ದಂತೆ ತಂದೆಗೋಸ್ಕರ ತಾಯಿಯ ಹೆಣವನ್ನೇ ಬಿಟ್ಟು ಶವಾಗಾರದಿಂದ ಕಾಲ್ಕಿತ್ತ 17 ವರ್ಷದ ಮಗ. ಈ ಹಿನ್ನಲೆಯಲ್ಲಿ ಕೊನೆಗೆ ರಾಜಿ ಪಂಚಾಯ್ತಿ ವಿಫಲವಾಗಿ ಮೃತಳ ಸಹೋದರರು ಸರಗೂರು ಪೊಲೀಸರಿಗೆ ವರದಕ್ಷಿಣೆ ಕಿರುಕುಳ, ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸರಗೂರು ಪೊಲೀಸ್ ಗುರುಸಿದ್ದಯ್ಯನನ್ನು ವಶಕ್ಕೆ ಪಡೆದಿದ್ದಾರೆ.