ಮೈಸೂರು: ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಿಗೆ ಟಿಕೆಟ್ ತಪ್ಪಿದ್ದಕ್ಕೆ ಕುಪಿತಗೊಂಡ ಕಾರ್ಯಕರ್ತರು ಜೆಡಿಎಸ್ ತಾಲೂಕು ಕಚೇರಿಯನ್ನೇ ಧ್ವಂಸಗೊಳಿಸಿ ಬೆಂಕಿಯಿಟ್ಟ ಘಟನೆ ಹೆಚ್,ಡಿ.ಕೋಟೆ ತಾಲೂಕು ಜೆಡಿಎಸ್ ಕಚೇರಿಯಲ್ಲಿ ನಡೆದಿದೆ.
ಹಾಲಿ ಹೆಚ್ಡಿ ಕೋಟೆ ತಾಲೂಕು ಜೆಡಿಎಸ್ ಅಧ್ಯಕ್ಷ ನಾಗರಾಜು ಅವರಿಗೆ ಜೆಡಿಎಸ್ ವರಿಷ್ಠ ದೇವೇಗೌಡ ಬಿ ಫಾರಂ ನೀಡಿದ್ದರು. ಅದೇ ರೀತಿ ಅದೇ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಮನ್ಮುಲ್ ನಿರ್ದೇಶಕ ಈರೇಗೌಡರಿಗೂ ಸಹ ಬಿಫಾರಂ ನೀಡಿದ್ದರು. ಆದರೆ ನಿನ್ನೆ ದೇವೇಗೌಡರು ತಾಲೂಕು ಅಧ್ಯಕ್ಷರಿಗೆ ಬಿಟ್ಟು ಈರೇಗೌಡರಿಗೆ ಅಂತಿಮ ಸಿ ಫಾರಂ ನೀಡಿದ್ದಾರೆ.
ಇದರಿಂದ ಈ ಕ್ಷೇತ್ರಕ್ಕೆ ಈರೇಗೌಡರೇ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾದ ಹಿನ್ನಲೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ನಾಗರಾಜ್ ತನಗೆ ಟಿಕೆಟ್ ತಪ್ಪಿದ್ದರಿಂದ ಅವರ ಬೆಂಬಲಿಗರು ಇಂದು ತಾಲೂಕು ಜೆಡಿಎಸ್ ಕಚೇರಿಗೆ ನುಗ್ಗಿ ಪಿಠೋಪಕರಣಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.