ಮೈಸೂರು: ಶವಾಚಾಲಯಕ್ಕೆ ನೀರಿಲ್ಲವೆಂದು ಬೀಗ ಜಡಿದು ತಿಂಗಳು ಕಳೆದರೂ ಶೌಚಾಲಯವಿಲ್ಲದೆ ಪರದಾಡುತ್ತಿದ್ದ ಮಹಾರಾಣಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ನೀರು ಕೊಡಿ ಎಂದು ಬೀದಿಗಿಳಿದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಘಟನೆ ಬುಧವಾರ ನಡೆದಿದೆ.
ಶತಮಾನದ ಸಂಭ್ರಮದಲ್ಲಿರುವ ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ವಿಭಾಗ, ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಇಲ್ಲಿ ಶೌಚಾಲಯಕ್ಕೆ ನೀರಿಲ್ಲದೆ ಬೀಗ ಜಡಿದು ತಿಂಗಳೇ ಕಳೆದಿದ್ದರೂ ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರ ಕಷ್ಟ ಕೇಳ ತೀರದಾಗಿದ್ದು ಈ ಬಗ್ಗೆ ಕಳೆದ ಮೂರು ವರ್ಷಗಳಿಂದಲೂ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರು ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಕಳೆದ ಮೂರು ತಿಂಗಳ ಹಿಂದೆ ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಿಗೆ ವಿದ್ಯಾರ್ಥಿನಿಯರ ವೇದಿಕೆ ಮನವಿ ಸಲ್ಲಿಸಿ ನಮಗೆ ಕಾಲೇಜಿನ ಶೌಚಾಲಯಕ್ಕೆ ಹಾಗೂ ಕುಡಿಯಲು ನೀರು ಒದಗಿಸಿಕೊಡಿ ಮನವಿ ಸಲ್ಲಿಸಿದ್ದರು ಕಾಲೇಜಿನ ಪ್ರಾಂಶುಪಾಲರು ಈ ಮನವಿಯನ್ನು ರಾಜ್ಯ ಸರ್ಕಾರಕ್ಕೆ ತಲುಪಿಸಿಯೇ ಇಲ್ಲ. ಇದನ್ನು ಪ್ರಶ್ನೆ ಮಾಡಿದರೆ ವಿದ್ಯಾರ್ಥಿನಿಯರಿಗೆ ಇಂಟರ್‍ನಲ್ ಮಾರ್ಕ್ಸ್ ಕಟ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ.
ಇದರಿಂದ ಭಯಭೀತರಾದ ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ಹೇಳಿಕೊಳ್ಳದೇ ಸುಮ್ಮನ್ನಿದ್ದರು. ಆದರೆ ಇಂದು ವಿದ್ಯಾರ್ಥಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಶೀಘ್ರವೇ ಶೌಚಾಲಯಕ್ಕೆ ನೀರು ಒದಗಿಸಬೇಕು. ಇಲ್ಲದಿದ್ದರೆ ಕಾಲೇಜನ್ನು ಬಂದ್ ಮಾಡಿಸಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.