ಮೈಸೂರು: ಮೈಸೂರು ಮಹಾನಗರಪಾಲಿಕೆ ಸ್ವಚ್ಛ ಸಂದೇಶ ಸಾರಲು ಮುಂದಾಗಿದ್ದು ಮೊಬೈಲ್ ಫೋನ್ ಕಾಲರ್ ಟ್ಯೂನ್ ಮೂಲಕ ಸ್ವಚ್ಛತೆ ಜಾಗೃತಿ ಮೂಡಿಸುವ ಹೊಸ ಪ್ರಯತ್ನವನ್ನು ಮಾಡಿದೆ.
ಮೈಸೂರು ಮಹಾನಗರಪಾಲಿಕೆಯ 65 ವಾರ್ಡ್ಗಳ ಸದಸ್ಯರು, 5 ನಾಮ ನಿರ್ದೇಶಿತ ಸದಸ್ಯರು ಸೇರಿದಂತೆ 345 ಅಧಿಕಾರಿಗಳ ಮೊಬೈಲ್ಗೆ ಇನ್ನು ಮುಂದೆ ಕರೆ ಮಾಡಿದರೆ ಸ್ವಚ್ಛ ಸಂದೇಶದ ಜಾಗೃತಿಯ ಕಾಲರ್ ಟೋನ್ ಕೇಳಲಿದೆ. ಪಾಲಿಕೆಯಿಂದ ನೀಡಲಾಗಿರುವ ಸಿಯುಜಿ ಸಿಮ್ ಕಾರ್ಡ್ ನಂಬರ್ಗಳಿಗೆ ಸ್ವಚ್ಛತೆ ಪಾಠ ಹೇಳುವ 30 ಸೆಕೆಂಡ್ಗಳ ಸಂದೇಶ ಹೇಳುವ ಕಾಲರ್ ಟೋನನ್ನು ಅಳವಡಿಸಲಾಗಿದೆ.
ಮೈಸೂರು ಮಹಾನಗರ ಪಾಲಿಕೆಯು ಸಂಭಾಷಣೆಯನ್ನು 3 ಸೆಕೆಂಡ್ನಲ್ಲಿ ಕೇಳಿಸಲಿದೆ. ಆ ಮೂಲಕವಾದರೂ ಜನರಿಗೆ ಸ್ವಚ್ಛತೆಯ ಹರಿವಿನ ಪಾಠ ಕಲಿಸಲು ಹೊರಟಿದೆ ಮೈಸೂರು ಮಹಾನಗರಪಾಲಿಕೆ. ಈಗಾಗಲೇ ಸ್ವಚ್ಛನಗರಿಯಲ್ಲಿ ನಂಬರ್ ಒನ್ ಸ್ಥಾನಗಳಿಸಿರುವ ಮೈಸೂರು ನಗರಪಾಲಿಕೆಯಲ್ಲಿ ಆತಂಕ ಉಂಟಾಗಿದೆ. ಎರಡನೇ ವರ್ಷದ ಸಿಟಿ ರ್ಯಾಂಕಿಂಗ್ ಸರ್ವೆಯನ್ನು ಜನವರಿಯಲ್ಲಿ ನಡೆಸಿದ್ದು, ಜನವರಿ 25 ರಂದು ಪ್ರಕಟವಾಗಬೇಕಿದ್ದ ಸ್ವಚ್ಛ ನಗರಗಳ ಪಟ್ಟಿ ಇದುವರೆವಿಗೂ ಬಿಡುಗಡೆಯಾಗಿಲ್ಲ.
ಇನ್ನೂ ಚಂಡೀಗಢ, ಸೂರತ್, ನವದೆಹಲಿ ಈ ಬಾರಿ ಸ್ವಚ್ಛನಗರಿ ಸ್ಥಾನದ ಪೈಪೋಟಿಗೆ ನಿಂತಿದ್ದು, ಸ್ವಚ್ಛ ನಗರಿ ಸ್ಥಾನ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಕೈಗೊಳ್ಳಲು ಮೈಸೂರು ಮಹಾನಗರಪಾಲಿಕೆ ಮುಂದಾಗಿದೆ. ಆದರೆ ಸದ್ಯಕ್ಕೆ ನಂಬರ್ಒನ್ ಸ್ಥಾನದಲ್ಲಿರುವ ನಗರಪಾಲಿಕೆಯಲ್ಲಿ ಕಸ ನಿರ್ವಹಣೆ, ವಿಂಗಡಣೆ, ಪುನರ್ ಬಳಕೆಯಲ್ಲಿ ಬೆಟ್ಟದಷ್ಟು ಲೋಪವಿದೆ. ಇಲ್ಲದೆ ನಗರದ ಬಹುತೇಕ ನಿವಾಸಿಗಳು ಕಸವಿಂಗಡಿಸುತ್ತಿಲ್ಲದಿರುವುದು ನಗರಪಾಲಿಕೆಗೆ ದೊಡ್ಡ ತಲೆ ನೋವಾಗಿದೆ. ಈ ಹಿನ್ನಲೆಯಲ್ಲಿ ನಗರವಾಸಿಗಳಿಗೆ ಅರಿವು ಮೂಡಿಸಿ ಕಸ ವಿಂಗಡಣೆಯ ಪಾಠ ಕಲಿಸಲು ಮಹಾನಗರ ಪಾಲಿಕೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.