News Kannada
Friday, July 01 2022

ಮೈಸೂರು

ಯೋಧ ಮಹೇಶ್ ಪಾರ್ಥೀವ ಶರೀರ ಯಾವಾಗ ಬರುತ್ತೆ? - 1 min read

Photo Credit :

ಯೋಧ ಮಹೇಶ್ ಪಾರ್ಥೀವ ಶರೀರ ಯಾವಾಗ ಬರುತ್ತೆ?

ಮೈಸೂರು: ಒಂದು ಕಡೆ ವೀರಯೋಧ ಹನುಮಂತಪ್ಪಕೊಪ್ಪದ್ ಅವರ ಅಂತ್ಯಕ್ರಿಯೆ ಹುಟ್ಟೂರು ಧಾರವಾಡದ ಕುಂದಗೊಳದ ಬೆಟದೂರಿನಲ್ಲಿ ಜನಸಾಗರದ ನಡುವೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯುತ್ತಿದ್ದರೆ, ಇತ್ತ ಮೈಸೂರು ಜಿಲ್ಲೆಯ ಕೆ.ಆರ್.ನಗರದ ಪಶುಪತಿ ಗ್ರಾಮದಲ್ಲಿ ಹನುಮಂತಪ್ಪಕೊಪ್ಪದ್ ಅವರೊಂದಿಗೆ ಸಿಯಾಚಿನ್ ನಲ್ಲಿ ಹುತಾತ್ಮನಾದ ಯೋಧ ಪಿ.ಎನ್.ಮಹೇಶ್ ಅವರ ಸಂಬಂಧಿಕರು ಪಾರ್ಥಿವ ಶರೀರದ ಆಗಮನದ ನಿರೀಕ್ಷೆಯಲ್ಲಿ ಅನ್ನ ನೀರು ಬಿಟ್ಟು ಕಾಯುತ್ತಿದ್ದಾರೆ.

ಹಾಗೆ ನೋಡಿದರೆ ಯೋಧ ಮಹೇಶ್ ಅವರ ತಂದೆ ನಾಗರಾಜ್ ಅವರು ಹೆಚ್.ಡಿ.ಕೋಟೆಯಲ್ಲಿ ಶಿಕ್ಷಕರಾಗಿದ್ದರಿಂದ ಅಲ್ಲಿಯೇ ನೆಲೆನಿಂತಿದ್ದರು. ಆದರೆ ಅವರು ಮೂಲತಃ ಕೃಷ್ಣರಾಜನಗರ ತಾಲೂಕು ಪಶುಪತಿ ಗ್ರಾಮದವರಾಗಿದ್ದು, ಸ್ವಗ್ರಾಮದಲ್ಲೀಗ ನಿರವಮೌನ ಆವರಿಸಿದ್ದು, ಕುಟುಂಬದ ರೋಧನ ಮುಗಿಲು ಮುಟ್ಟಿದೆ.

ಪಾರ್ಥೀವ ಶರೀರ ಇಂದು ಬರುತ್ತೆ, ನಾಳೆ ಬರುತ್ತೆ ಎಂದು ಜನತೆ ಕಾಯುತ್ತಿದ್ದಾರೆ. ಮಗ ಜೀವಂತ ಬರುತ್ತಾನೆ ಎಂದು ನಂಬಿದ್ದ ಕುಟುಂಬಕ್ಕೆ ಸಾವಿನ ಸುದ್ದಿ ಬರಸಿಡಿಲಿಂತೆ ಬಡಿದಿದ್ದು, ಕೊನೆಪಕ್ಷ ಮಗನ ಜೀವಂತವಾಗಿ ನೋಡಲಾಗದಿದ್ದರೂ ಪಾರ್ಥೀವ ಶರೀರ ನೋಡಿ ಸಮಾಧಾನ ಪಟ್ಟುಕೊಳ್ಳುತ್ತೇವೆ ಎಂದು ಹೆತ್ತವರು, ಸಂಬಂಧಿಕರು ಹೇಳುತ್ತಿದ್ದಾರೆ. ಯೋಧ ಮಹೇಶ್ ಹಿಮಪಾತದಲ್ಲಿ ಸಿಲುಕಿ ಕೊನೆಯುಸಿರೆಳೆದ ಸುದ್ದಿ ಬಳಿಕ  ಇಡೀ ಗ್ರಾಮವೇ ಶೋಕ ಸಾಗರದಲ್ಲಿದೆ. ಗ್ರಾಮಸ್ಥರು, ಸಂಬಂಧಿಕರು ಯೋಧನ ಮನೆ ಮುಂದೆ ನೆರೆದಿದೆ.

ಇಷ್ಟರಲ್ಲೇ ಪಾರ್ಥಿವ ಶರೀರ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುವ ಕಾರಣ ಹುಟ್ಟೂರು ಪಶುಪತಿ ಗ್ರಾಮದಲ್ಲಿ ತಂದೆಗೆ ಸೇರಿದ ಜಮೀನಿನಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ದತೆಯನ್ನು ಗ್ರಾಮಸ್ಥರು ಮಾಡಿದ್ದಾರೆ. ಜಮೀನನ್ನು ಸಮತಟ್ಟು ಮಾಡಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವೀರಯೋಧನ ಮುಖದರ್ಶನ ಮಾಡಲು ಬರುವ ಜನಕ್ಕೆ ಅನುಕೂಲವಾಗಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಶಾಮಿಯಾನ ಅಳವಡಿಕೆಯನ್ನು ಮಾಡಲಾಗಿದೆ. ಸೇರಿದಂತೆ ನಾನಾ ಸಿದ್ದತಾ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದಾರೆ.

ದೇಶ ಸೇವೆಯಲ್ಲೇ ಪ್ರಾಣ ಬಿಟ್ಟ ಯೋಧನ ಅಂತ್ಯಸಂಸ್ಕಾರ ಮಾಡುವ ಸಂಬಂಧ ಜಿಲ್ಲಾಡಳಿತ  ಯಾವುದೇ ಕ್ರಮಕೈಗೊಂಡಿಲ್ಲ. ಒಂದಿಬ್ಬರು ಅಧಿಕಾರಿಗಳು ಭೇಟಿ ನೀಡಿದ್ದು ಬಿಟ್ಟರೆ ಇನ್ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಜನಪ್ರತಿನಿಧಿಗಳು ಕೂಡ ಸುಳಿದಿಲ್ಲ. ವೀರಯೋಧ ಮಹೇಶ್ ಮುಖ್ಯಮಂತ್ರಿ ತವರು ಜಿಲ್ಲೆಯವರಾದರೂ ಇತ್ತ ಸಿದ್ದರಾಮಯ್ಯನವರು ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ. ಕಳೆದ ಕೆಲದಿನ ಮೈಸೂರಿನಲ್ಲೇ ಇದ್ದರೂ ಯೋಧನ ಮನೆಗೆ ತೆರಳುವ ಯತ್ನ ಮಾಡಿಲ್ಲ. ಉಸ್ತುವಾರಿ ಸಚಿವರೂ ತಲೆಹಾಕಿಲ್ಲ. ಎಲ್ಲರೂ ಚುನಾವಣೆ ಗುಂಗಿನಲ್ಲಿರುವ ಕಾರಣ ಯಾರಿಗೂ ಯೋಧನ ಕುಟುಂಬದ ಯೋಗಕ್ಷೇಮ ವಿಚಾರಿಸುವ ಸೌಜನ್ಯ ತೋರಿದಂತೆ ಕಂಡು ಬರುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರ್ತವ್ಯದಲ್ಲಿದ್ದ ಯೋಧ ಮಹೇಶ್ ನಾಲ್ಕು ತಿಂಗಳ ಹಿಂದೆ ಪಶುಪತಿಗೆ ಗ್ರಾಮಕ್ಕೆ ಬಂದು ಎರಡು ದಿನಗಳ ಕಾಲ ಉಳಿದು ಹೋಗಿದ್ದು, ಏಪ್ರಿಲ್ ನಲ್ಲಿ ರಜೆ ಮೇಲೆ ಊರಿಗೆ ಬರುವುದಾಗಿ ಹೇಳಿ ಹೋಗಿದ್ದನ್ನು ಅವರ ದೊಡಪ್ಪ ಬಸಪ್ಪ ನೆನಪಿಸಿಕೊಂಡು ಕಣ್ಣೀರಾಗುತ್ತಿದ್ದಾರೆ. 35 ವರ್ಷದ ಹಿಂದೆಯೇ ಕೆಲಸದ ನಿಮಿತ್ತ ಹೆಚ್.ಡಿ.ಕೋಟೆ ಪಟ್ಟಣದಲ್ಲಿ ನೆಲೆನಿಂತ ನಾಗರಾಜು ಕುಟುಂಬ ಹಬ್ಬಹರಿದಿನದಲ್ಲಿ ಹುಟ್ಟೂರು ಪಶುಪತಿಗೆ ಬರುತಿತ್ತು. ಕೆಲ ವರ್ಷದ ಹಿಂದೆ ಇಹಲೋಕ ತ್ಯಜಿಸಿದ ತಂದೆ ನಾಗರಾಜ್ ಅವರಿಗೆ ನಾಲ್ಕು ಮಂದಿ ಸಹೋದರರು. ನಾಗರಾಜ್ ಅವರಿಗೆ ಸೇರಿದ ಜಮೀನನ್ನು ಸಹೋದರರೆ ನಿರ್ವಹಣೆ ಮಾಡುತ್ತಿದ್ದಾರೆ.

See also  ಚಿನ್ನದ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ

ನಾಗರಾಜ್ ಅವರ ಕಿರಿಯ ಮಗನಾದ ಮಹೇಶ್ ಗೆ ದೇಶಸೇವೆ ಮಾಡಬೇಕೆಂಬುದು ಹೆಬ್ಬಯಕೆ. ಹಾಗಾಗಿ 9 ವರ್ಷದ ಹಿಂದೆ ಯೋಧನಾಗಿ ಸೇನೆಗೆ ಸೇರಿದ್ದನು. ಶನಿವಾರ ಪಾರ್ಥೀವ ಶರೀರ ಗ್ರಾಮಕ್ಕೆ ಬರುವ ನಿರೀಕ್ಷೆಯಿದೆ. ಎನ್ನಲಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು