ಮಡಿಕೇರಿ: ಸಿಯಾಚಿನ್ ಹಿಮಪಾತಕ್ಕೆ ಸಿಲುಕಿ ಕೊಡಗಿನ ಯೋಧರೊಬ್ಬರು ವೀರಮರಣವನ್ನಪ್ಪಿ 29 ವರ್ಷವಾದರೂ ಇನ್ನೂ ಅವರ ಮೃತದೇಹ ಸಿಕ್ಕಿಲ್ಲ.
ಮಡಿಕೇರಿಯ ಪಾಲೆಕಂಡ ಮೇಜರ್ ಅತುಲ್ ದೇವಯ್ಯ ಅವರು ಸಿಯಾಚಿನ್ ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ವೀರಮರಣವಪ್ಪಿದ ಯೋಧ. ಮಡಿಕೇರಿ ನಗರದ ರಾಣಿಪೇಟೆ ನಿವಾಸಿಯಾಗಿರುವ ಪಾಲೆಕಂಡ ಎಂ. ದೇವಯ್ಯ ಅವರ ದ್ವಿತೀಯ ಪುತ್ರನೇ ಮೇಜರ್ ಪಾಲೆಕಂಡ ಅತುಲ್ ದೇವಯ್ಯ. ಅವರು ಭಾರತೀಯ ಮಿಲಿಟರಿ ಅಕಾಡೆಮಿಯ ಮೂಲಕ ಮರಾಠ ರೆಜಿಮೆಂಟ್ ವಿಭಾಗಕ್ಕೆ ಅಂದಾಜು 1975ರಲ್ಲಿ ಯೋಧರಾಗಿ ಸೇರ್ಪಡೆಗೊಂಡಿದ್ದರು. ಅತುಲ್ ದೇವಯ್ಯನವರು ಸಿಯಾಚಿನ್ ವ್ಯಾಪ್ತಿಯಲ್ಲಿ 11.2.1987ರಲ್ಲಿ ಮೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಅತುಲ್ ದೇವಯ್ಯ ಸಹಿತ 13 ಜನ ಯೋಧರು ಹಿಮಪಾತದಡಿ ಸಿಲುಕಿ ವೀರ ಮರಣವಪ್ಪಿದ್ದರು.
ಆ ಸಂದರ್ಭ ಸೇನೆಯು ಈ 14 ಜನರ ಮೃತದೇಹಗಳನ್ನು ಹಿಮಪಾತದ ಪ್ರಪಾತದಿಂದ ಬೇರ್ಪಡಿಸಿ ಹೊರತೆಗೆಯಲು ಶತ ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಬಹುಶಃ ಆಗಿನ ಸಂದರ್ಭದಲ್ಲಿ ಹಿಮಬಂಡೆಯನ್ನು ಕತ್ತರಿಸಿ ತೆಗೆಯುವ ಆಧುನಿಕ ಸಲಕರಣೆಗಳು ಇಲ್ಲದ್ದರಿಂದ ಅವತ್ತು ಸಾಧ್ಯವಾಗಲಿಲ್ಲವೇನೋ? ಮೇಜರ್ ಅತುಲ್ ದೇವಯ್ಯ ಅವರನ್ನು ಕುಟುಂಬ ಇದೀಗ ದಿನವೂ ಸ್ಮರಿಸಿಕೊಳ್ಳುತ್ತಿದೆ. ಜೀವಂತವಾಗಿ ಬಾರದೆ ಹೆತ್ತವರಿಗೂ ಮುಖದರ್ಶನ ಮಾಡಲು ಸಾಧ್ಯವಾಗದೆ ಹುತಾತ್ಮನಾಗಿ ಹೋದ ಅತುಲ್ ದೇವಯ್ಯ ಅವರ ಕುಟುಂಬದ ಸ್ಥಿತಿ ಹೇಗಿದ್ದಿರಬಹುದು ಯೋಚಿಸಿ. ಆದರೆ ನೀವು ನಂಬಲೇ ಬೇಕಾದ ವಿಚಾರ ಅಂದರೆ ಅವರ ತಂದೆ ಪಾಲೆಕಂಡ ಎಂ. ದೇವಯ್ಯ ಕೂಡ ಸೇನೆಯಲ್ಲಿ ಮೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು. ಮಗನ ಸಾವು ದುಃಖ ತಂದರೂ ಮಗ ದೇಶಕ್ಕೊಸ್ಕರ ಪ್ರಾಣ ಬಿಟ್ಟ ಎಂಬ ಹೆಮ್ಮೆ ಅವರದ್ದಾಗಿತ್ತು.
ಸಿಯಾಚಿನ್ ನಲ್ಲಿ 29 ವರ್ಷದ ಹಿಂದೆ ಹುತಾತ್ಮನಾದ ಯೋಧ ಅತುಲ್ ದೇವಯ್ಯ ಅವರ ಬಗ್ಗೆ ಹೇಳುವುದಾದರೆ ಅವರು ತಮ್ಮ ವಿದ್ಯಾಭ್ಯಾಸವನ್ನು ಕಾರ್ಕಳದ ಭುವನೇಂದ್ರ ಕಾಲೇಜು ಮತ್ತು ಬೆಂಗಳೂರಿನ ಸೆಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನಲ್ಲಿ ಮಾಡಿದ್ದರು, ಅತುಲ್ ದೇವಯ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲೇ ಹಾಕಿ ಪಟುವಾಗಿದ್ದರು. ಅವರು ಅಮ್ಮತ್ತಿಯ ನೆಲ್ಲಮಕ್ಕಡ ಚಿಣ್ಣಪ್ಪ ಅವರ ಪುತ್ರಿ ಶೈಲಾ ಅವರನ್ನು ವಿವಾಹವಾಗಿದ್ದರು. (ಇದೀಗ ಶೈಲಾ ದೇವಯ್ಯ ಮತ್ತು ಪುತ್ರ ಬೆಳಗಾಂನಲ್ಲಿ ವಾಸವಾಗಿದ್ದಾರೆ) 11.2.1987ರಲ್ಲಿ ನಡೆದ ಹಿಮಪಾತದಲ್ಲಿ ಅವರು ಹುತಾತ್ಮರಾದರು.
ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭ ದೇಶದ ಗಡಿ ಭಾಗಗಳಲ್ಲಿ ಯುದ್ಧದಂತಹ ಕಾರ್ಯಾಚರಣೆಯಲ್ಲಿ, ಆಕಸ್ಮಿಕ ಘಟನೆಗಳಲ್ಲಿ ಮತ್ತು ಭಯೋತ್ಪಾದಕರ ಗುಂಡಿನ ದಾಳಿಗಳಲ್ಲಿ ವೀರಮರಣವನ್ನಪ್ಪಿದ ವೀರ ಯೋಧರ ಮೃತದೇಹಗಳನ್ನು ಅವರವರ ಸ್ವಗ್ರಾಮಗಳಿಗೆ ಸೇನೆಯ ಸಕಲ ಗೌರವದೊಂದಿಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು.
ಅಲ್ಲಿ ತನಕ ಸೇನೆಯಲ್ಲಿ ಯೋಧ ಮೃತಪಟ್ಟರೆ ಮಾಹಿತಿ ಅಷ್ಟೆ ದೊರೆಯುತ್ತಿತ್ತು. ಯೋಧರು ಮತ್ತು ಸೇನಾಧಿಕಾರಿಗಳು ವೀರ ಮರಣವಪ್ಪಿದರೆ ಅವರವರ ಮನೆಗಳಿಗೆ ತಲುಪಿಸುವ ವ್ಯವಸ್ಥೆಯಿಂದ ಇಂದು ಭಾರತೀಯ ಸೇನೆಯ ಯೋಧನಿಗೆ ಶ್ರೀಸಾಮಾನ್ಯನೂ ಗೌರವ ಸಲ್ಲಿಸಲು ಮತ್ತು ಅವನ ಸೇವೆಯನ್ನು ಶ್ಲಾಘಿಸಲು, ಸ್ಮರಿಸಲು ಸಾಧ್ಯವಾಗಿದೆ.