ಮೈಸೂರು: ಹೆಬ್ಬಾಳ ಉಪಚುನಾವಣೆಯಲ್ಲಿ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲವಾಗಿರುವ ಸಿಎಂ ಸಿದ್ಧರಾಮಯ್ಯನವರಿಗೆ ಜಿ.ಪಂ ಹಾಗೂ ತಾ.ಪಂ ಚುನಾವಣೆಯೇ ನಿರ್ಣಾಯಕ ಚುನಾವಣೆಯಾಗಲಿದ್ದು, ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಬೇಸತ್ತಿರುವ ಜನತೆ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಮೈಸೂರು ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯಯವರೇ ಕಣಕ್ಕಿಳಿದಿರುವ ಬೆನ್ನಲ್ಲೇ ಇಂದು ಬಿಜೆಪಿಯಿಂದ ಜಿಪಂ-ತಾಪಂ ಚುನಾವಣಾ ಕಣಕ್ಕಿಳಿದಿರುವ ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದಗೌಡ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಸಿಎಂ ಸಿದ್ದರಾಮಯ್ಯನವರ ವಿರುದ್ದ ಹರಿಹಾಯ್ದಿದಿದ್ದಾರೆ.
ಹೆಬ್ಬಾಳು ಕ್ಷೇತ್ರದಿಂದ ತಮ್ಮ ಆಪ್ತನಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿರುವ ಸಿದ್ಧುಗೆ ವರಿಷ್ಠ ನಿರ್ಧಾರ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಲ್ಲದೆ ವರಿಷ್ಠರ ಅವಕೃಪೆ ಕಾಂಗ್ರೆಸ್ ನಲ್ಲಿಯೇ ಅವರ ನಡೆಗೆ ತಿಲಾಂಜಲಿ ಇಡುವ ಕಾಲ ಸಮೀಪವಾಗಿದೆ ಎಂದು ಛೇಡಿಸಿದರು. ಈ ಹಿನ್ನಲೆಯಲ್ಲಿ ಅಲ್ಲಿನ ನೋವನ್ನು ಮರೆಯಲು ಬೆಂಗಳೂರನ್ನು ತೊರೆದಿರುವ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರಚಾರ ಮಾಡುತ್ತ, ರಾಜ್ಯದ ಅಭಿವೃದ್ಧಿ ಮರೆತ್ತಿದ್ದಾರೆ ಎಂದು ಆರೋಪಿಸಿದರು.
ಬಹಳ ಕೂತೂಹಲಕಾರಿ ವಿವಾದವೊಂದರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರು ಸ್ನೇಹಿತರಾಗುತ್ತಿದ್ದಾರೆ. ಯಾಕೆಂದರೆ ಕಳೆದ 15 ದಿನಗಳಿಂದ ವಾಚು, ಕನ್ನಡಕ ವಿಷಯ ಮಾತನಾಡುತ್ತ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವುದನ್ನು ಮರೆತು ಬಿಟ್ಟಿದ್ದಾರೆ ಎಂದು ದೂರಿದರು.
ವಾಚ್, ಕನ್ನಡಕ ವಿಷಯವಾಗಿ ಲೋಕಾಯುಕ್ತ ಕಚೇರಿ ಅಥವಾ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದು ಮುಖ್ಯಮಂತ್ರಿಗಳು ತನಿಖೆ ನಡೆಸಲಿ, ಆದರೆ, ಇದೇ ವಿಚಾರವಾಗಿ ಕಾಲಹರಣ ಮಾಡುವುದು ಬೇಡ ಅಭಿವೃದ್ಧಿ ಕಡೆ ಗಮನ ಹರಿಸಿಲಿ ಎಂದು ಇಬ್ಬರಿಗೂ ಬುದ್ಧಿ ಮಾತು ಹೇಳಿದರು.