ಮೈಸೂರು: ಹನುಮಂತಪ್ಪಕೊಪ್ಪದ್ ಸೇರಿದಂತೆ ಹತ್ತು ಮಂದಿ ಹಿಮಪಾತಕ್ಕೆ ವೀರಮರಣವನ್ನಪ್ಪಿದ ಬಳಿಕ ಇದೀಗ ಸಿಯಾಚಿನ್ ಯುದ್ಧ ಭೂಮಿಯ ಸಂಕಷ್ಟ ಬಗ್ಗೆ ಇಡೀ ದೇಶದ ಜನಕ್ಕೆ ಗೊತ್ತಾಗಿದೆ.
ಸಿಯಾಚಿನ್ ಅಂದರೆ ಏನು? ಅಲ್ಲಿ ನಮ್ಮ ಯೋಧರು ಎಂತೆಂಥ ಸಂಕಷ್ಟಗಳನ್ನು ಎದುರಿಸಿ ದೇಶ ಕಾಯುತ್ತಿದ್ದಾರೆ ಎಂಬ ಚಿತ್ರಣ ಈಗ ಎಲ್ಲರ ಕಣ್ಮುಂದೆ ಹಾದು ಹೋಗುತ್ತಿದೆ. ತಮ್ಮ ಸೇವಾವಧಿಯಲ್ಲಿ ಇಂತಹ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿ ಬಂದ ಹಲವು ವೀರಯೋಧರು ಕೊಡಗಿನಲ್ಲಿದ್ದಾರೆ. ಅವರು ಕೇವಲ ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳದೆ ಇತರೆ ಯೋಧರನ್ನು ರಕ್ಷಿಸಿ ಭಾರತಾಂಭೆಯ ಹೆಮ್ಮೆಯ ಪುತ್ರರಾಗಿದ್ದಾರೆ.
ಸಿಯಾಚಿನ್ ನಲ್ಲಿ ಹಿಮಪಾತ ಆಗಿಂದಾಗ್ಗೆ ಆಗುವ ಪ್ರಕ್ರಿಯೆ. ಈ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದೇ ಕಷ್ಟ. ಹೀಗಿರುವಾಗ ಮತ್ತೊಬ್ಬ ಯೋಧನನ್ನು ಪ್ರಾಣದ ಹಂಗು ತೊರೆದು ರಕ್ಷಿಸುವುದು ಸುಲಭದ ಕೆಲಸವಲ್ಲ ಆದರೆ ಅಂಥ ಕಾರ್ಯವನ್ನು ಮಾಡಿದ ಆ ದಿನಗಳನ್ನು ಕೊಡಗಿನ ಯೋಧರ ನೆನಪಿಸಿಕೊಂಡಿದ್ದಾರೆ.
ಲೆ.ಕ.ಉತ್ತಯ್ಯ: ಅವಿವಾಹಿತರಾಗಿರುವ ಮಡಿಕೇರಿಯ ಸಂಪಿಗೆಕಟ್ಟೆ ನಿವಾಸಿ, ನಿವೃತ್ತ ಜೀವನ ನಡೆಸುತ್ತಿರುವ ಇವರು ಸೇವಾವಧಿಯಲ್ಲಿ ಎರಡು ವರ್ಷಗಳ ಕಾಲ ಸಿಯಾಚಿನ್ ಯುದ್ದ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದಾರಂತೆ. ತಮ್ಮ ಸೇವಾ ಅವಧಿಯಲ್ಲಿ ಹಿಮಪಾತದ ಪ್ರಪಾತದಲ್ಲಿ ಸಿಲುಕಿದ್ದ 20 ಮಂದಿ ಯೋಧರಲ್ಲಿ 10 ಮಂದಿ ಯೋಧರನ್ನು ರಕ್ಷಣೆ ಮಾಡಿ ಪ್ರಾಣಪಾಯದಿಂದ ಪಾರು ಮಾಡಿದ್ದಾರಂತೆ. 1988-89ರಲ್ಲಿ 2 ವರ್ಷ ಕಾಲ ಸಿಯಾಚಿನ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದಾಗಿ ಹೇಳುತ್ತಾರೆ.
ಅವರ ಪ್ರಕಾರ ಸಿಯಾಚಿನ್ ಯುದ್ಧ ಭೂಮಿಯಲ್ಲಿ ಸೇವೆ ಮಾಡಲು ಪುಣ್ಯ ಮಾಡಿರಬೇಕು. ಗಂಡೆದೆಯುಳ್ಳ ಶಕ್ತಿಯನ್ನು ಹೊಂದಿರಬೇಕು. ಅಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭ ಮೆದುಳಿನ ರಕ್ತ ಹೆಪ್ಪುಗಟ್ಟುತ್ತದೆ. ಇಂತಹ ಭಯಂಕರ ಸಮಸ್ಯೆಗಳಿಂದ ಸೈನಿಕರು ಮಾನಸಿಕವಾಗಿ ಬಳಲುತ್ತಿರುತ್ತಾರೆ. ಅವಕಾಶ ಸಿಕ್ಕರೆ ಮತ್ತೊಮ್ಮೆ ಸೇವೆ ಮಾಡಲು ಸಿದ್ಧ ಎಂದು ಅವರು ಆತ್ಮವಿಶ್ವಾಸದ ಮಾತನಾಡುತ್ತಾರೆ.