ಮೈಸೂರು: ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಮಲ್ಲಿಗೆ ನಗರಿ ಎಂಬ ಹೆಸರುಗಳಿಂದ ಪ್ರಸಿದ್ಧವಾಗಿದ್ದ ಮೈಸೂರು ಈಗ ಸ್ವಚ್ಛ ನಗರಿ ಎಂಬ ಖ್ಯಾತಿಯನ್ನು ಎರಡನೇ ಬಾರಿಗೂ ಪಡೆದುಕೊಳ್ಳುವ ಮೂಲಕ ದೇಶಕ್ಕೆ ಮಾದರಿ ನಗರವಾಗಿ ಹೊರಹೊಮ್ಮಿದೆ.
75 ನಗರಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆಯುವಲ್ಲಿ ಮೈಸೂರು ಮಹಾನಗರಪಾಲಿಕೆ ಪಾತ್ರ ಪ್ರಮುಖವಾಗಿರುತ್ತದೆ. ಏಕೆಂದರೆ ನಗರಪಾಲಿಕೆ ಕಸ ಸಂಗ್ರಹಣೆ, ಸಾಗಣೆ, ನಿರ್ವಹಣೆ ಜತೆಗೆ ಶೇ.98 ರಷ್ಟು ಮುಕ್ತ ಶೌಚಾಲಯ ನಗರಿಯನ್ನಾಗಿಸಿದ ಕೀರ್ತಿ ಪಾಲಿಕೆಯದಾಗಿದೆ. ಪ್ರಸ್ತುತ ಮೈಸೂರಿನಲ್ಲಿ ನಿತ್ಯ 405 ಟನ್ ಕಸ ಸಂಗ್ರಹವಾಗುತ್ತಿದ್ದು, 9 ಶೂನ್ಯ ಘಟಕಗಳು ನಿರಂತರ ಕಾರ್ಯದಲ್ಲಿವೆ. 2600 ಹಂಗಾಮಿ ಹಾಗೂ 630 ಕಾಯಂ ಪೌರಕಾರ್ಮಿಕರು ಸ್ವಚ್ಛ ನಗರಿಯ ಶಪಥ ಪ್ರತಿಫಲವೇ ಸುಂದರನಗರವಾಗಿ ಮೈಸೂರು ರೂಪುಗೊಂಡಿದೆ. 250 ಶೌಚಾಲಯಗಳು ಪ್ರಸ್ತುತ ನಿರ್ಮಿಸಿದ್ದು 429 ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ನಗರಪಾಲಿಕೆ ಹೊಂದಿದೆ.
ತಿಂಗಳ ಹಿಂದೆಯಷ್ಟೆ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರದ ನಗರಾಭಿವೃದ್ದಿ ಸಚಿವಾಲಯ ನಿಯೋಜಿಸಿರುವ ಕ್ವಾಲಿಟಿ ಕೌನ್ಸಿಲ್ ಆಪ್ ಇಂಡಿಯಾ ಸಮೀಕ್ಷೆ ಕೈಗೊಂಡಿತು. ಮೂರು ರೀತಿಯ ಮಾನದಂಡಲ್ಲಿ ಸಮೀಕ್ಷೆ ಕೈಗೊಂಡು ನಗರಪಾಲಿಕೆ ಕೈಗೊಂಡಿರುವ ಕ್ರಮಗಳ ಪರಾಮರ್ಶೆ ಸಾರ್ವಜನಿಕರಿಂದ ನೇರವಾಗಿ ಅಭಿಪ್ರಾಯ ಸಂಗ್ರಹ ಹಾಗೂ ಪ್ರವಾಸಿ ತಾಣಾಗಳಿಗೆ ಭೇಟಿ ನೀಡಿ ಅಲ್ಲಿ ಖುದ್ಧ್ ಪರಿಶೀಲನೆ ನಡೆಸಿ ಅವಲೋಕಿಸಿ ಅಂಕ ನೀಡಲು ಕಮಿಟಿ ನಿರ್ಧರಿಸಿತು. ಪಾಲಿಕೆ ಕ್ರಮಗಳ ನಿರ್ವಹಣೆಯಲ್ಲಿ ಮೈಸೂರಿಗೆ ಸಿಕ್ಕಿರುವುದು 1000 ಕ್ಕೆ 935 ಅಂಕಗಳು, ಸಾರ್ವಜನಿಕರ ಅಭಿಪ್ರಾಯ, ವೆಬ್ಸೈಟ್ ಮಾಹಿತಿ, ಜನರ ನೇರಭೇಟಿಯಿಂದ 500 ಕ್ಕೆ 348 ಅಂಕ ಹಾಗೂ ಪ್ರವಾಸಿ ತಾಣಾಗಳು, ಆಸ್ಪತ್ರೆ, ಸಾರ್ವಜನಿಕ ಸ್ಥಳಗಳ ಪರಾಮರ್ಶೆಯಿಂದ 466 ಅಂಕವನ್ನು ಮೈಸೂರು ಮಹಾನಗರ ಪಡೆದುಕೊಂಡಿತು.